
ಬೆಂಗಳೂರು: 'ದೊಡ್ಡ ಉಗ್ರರ' ಜಾಲವೊಂದರ ಭಾಗವಾಗಿ ವಿಧ್ವಂಸಕ ಕೃತ್ಯ ನಡೆಸಲು ಕೆಲಸ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ 3 ಶಂಕಿತ ಉಗ್ರರಿಗೆ 9ನೇ ಎಸಿಎಂಎಂ ನ್ಯಾಯಾಲಯ ಜನವರಿ 21 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಗುರುವಾರ ಭಟ್ಕಳದಲ್ಲಿ ದಾಳಿ ನಡೆಸಿದ ಎನ್‌ಐಎ ತಂಡಕ್ಕೆ ಸ್ಫೋಟಕ ವಸ್ತುಗಳನ್ನು ಹೊಂದಿರುವ ಅಬ್ದುಲ್ ಸುಬೂರ್ (24) ಎಂಬಾತ ಸಿಕ್ಕಿ ಬಿದ್ದಿದ್ದನು. ಈತ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಬೆಂಗಳೂರಿನಲ್ಲಿ ಸದ್ದಾಂ ಹುಸೇನ್ (35), ಸೈಯದ್ ಇಸ್ಮಾಯಿಲ್ ಅಫಕ್ (34) ಎಂಬ ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಈ ಆರೋಪಿಗಳಿಗೆ ನಿಷೇಧಿತ ಉಗ್ರ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕವಿದೆ ಎಂಬ ಶಂಕೆ ಇದೆ. ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಭಟ್ಕಳದವರಾಗಿದ್ದಾರೆ. ಇವರು ಪುಲಿಕೇಶಿನಗರದ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಂದ ಮಹತ್ವದ ದಾಖಲೆಗಳನ್ನು ಬೆಂಗಳೂರಿನ ವಿಶೇಷ ಪೊಲೀಸರ ತಂಡ ವಶಪಡಿಸಿಕೊಡಿತ್ತು
ಮೂವರು ಬಂಧಿತ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಇವರನ್ನು 14 ದಿನಗಳ ಕಾಲ ಪೊಲೀಸ್ ವಶದಲ್ಲಿರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
Advertisement