'ಮೆಸೆಂಜರ್ ಆಫ್ ಗಾಡ್' ಪ್ರದರ್ಶನ ವಿರೋಧಿಸಿ ಸಿಖ್ ಸಂಘಟನೆಗಳಿಂದ ಪ್ರತಿಭಟನೆ
ಚಂಡೀಗರ್: ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನಾಯಕ ನಟನಾಗಿರುವ 'ಮೆಸೆಂಜರ್ ಆಫ್ ಗಾಡ್' ವಿವಾದಿತ ಸಿನೆಮಾದ ಪ್ರದರ್ಶನವನ್ನು ವಿರೋಧಿಸಿ ವಿವಿಧ ಸಿಖ್ ಸಂಘಟನೆಗಳು ಹರ್ಯಾಣಾದ ಅಂಬಾಲದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿವೆ.
ಈ ಸಿನೆಮಾಗೆ ಸೆನ್ಸಾರ್ ಸರ್ಟಿಫಿಕೆಟ್ ಸಿಕ್ಕಿರುವ ಹಿನ್ನಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹರ್ಯಾಣ ಮತ್ತು ಪಂಜಾಬಿನ ಜಿಲ್ಲಾಡಳಿತಕ್ಕೆ ಆಯಾ ರಾಜ್ಯದ ಸರ್ಕಾರಿ ಅಧಿಕಾರಿಗಳು ಸೂಚಿಸಿದ್ದಾರೆ.
ಚಂಡಿಘರ್ ನ ಆಡಳಿತ ಈ ಸನ್ನಿವೇಶವನ್ನು ಕೂಲಂಕುಷವಾಗಿ ಗಮನಿಸಲಿದೆ ಎನ್ನಲಾಗಿದೆ.
ಮುಂಜಾಗರೂಕ ಕ್ರಮವಾಗಿ ಇಂಡಿಯನ್ ನ್ಯಾಷನಲ್ ಲೋಕ ದಳದ ೬೦ ಜನ ಸದಸ್ಯರನ್ನು ಹರ್ಯಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಶಿರೋಮಣಿ ಅಕಾಲಿ ದಳ(ಬಾದಲ್), ಹರ್ಯಾಣ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳದ ಸದಸ್ಯರು ಅಂಬಾಲದ ಗ್ಯಾಲೆಕ್ಸಿ ಮಾಲ್ ನ ಮುಂದೆ ಘೋಷಣೆಗಳನ್ನು ಕೂಗಿದ್ದಲ್ಲದೆ, ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಇದೇ ವಿವಾದದ ಹಿನ್ನಲೆಯಲ್ಲಿ ಸೆನ್ಸಾರ್ ಬೋರ್ಡ್ ನ ಮುಖಸ್ಥೆ ಲೀಲಾ ಸ್ಯಾಮ್ಸನ್ ರಾಜೀನಾಮೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ