ಬಿಬಿಎಂಪಿ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿ ಮೆರೆದಾಟ, ಉಳಿದ ಪಕ್ಷಗಳ ಪರದಾಟ

ಬೆಂಗಳೂರು ಮಹಾನಗರವನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಎದುರಿಸಲು ಬಿಜೆಪಿ ಸಮರ್ಥ ಪಕ್ಷ ಎಂದು ಮಹಾನಗರದ ಜನ ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ
ಬಿಬಿಎಂಪಿ
Updated on

ಬೆಂಗಳೂರು: ಬೆಂಗಳೂರು ಮಹಾನಗರವನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಎದುರಿಸಲು ಬಿಜೆಪಿ ಸಮರ್ಥ ಪಕ್ಷ ಎಂದು ಮಹಾನಗರದ ಜನ ಭರವಸೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿ ನಿಲ್ಲುವ ಸಾಧ್ಯತೆ ಕಾಣಿಸುತ್ತಿದೆ.

ಕನ್ನಡಪ್ರಭ, ಸುವರ್ಣ ನ್ಯೂಸ್ ಹಾಗೂ ನೀಲ್ಸನ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶ ಇದು. ಚುನಾವಣೆ ಘೋಷಣೆಯಾಗುವ ಮೊದಲು ಬಿಬಿಎಂಪಿಯ ಎಂಟು ವಲಯಗಳಿಗೆ ಸಂಬಂಧಿಸಿದ ಎಲ್ಲ ವಾರ್ಡ್ ಗಳಲ್ಲೂ ಸಮೀಕ್ಷೆ ನಡೆಸಲಾಗಿದ್ದು, ತಮ್ಮ ಸಮಸ್ಯೆಗಳಿಗೆ ಯಾವ ಪಕ್ಷ ಪರಿಹಾರ ನೀಡಬಲ್ಲುದು ಎನ್ನುವ ಪ್ರಶ್ನೆಯನ್ನು ಮುಂದಿಟ್ಟಾಗ, ಶೇ. 54ರಷ್ಟು ಮಂದಿ ಬಿಜೆಪಿಯತ್ತ ಬೆಟ್ಟು ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಭರವಸೆ ಇಟ್ಟವರು ಶೇ. 33ರಷ್ಟು ಜನರಾದರೆ, ಜೆಡಿಎಸ್ ಮೇಲೆ ಶೇ. 9ರಷ್ಟು ಮತದಾರರು ನಂಬಿಕೆ ಇಟ್ಟಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಈಗಷ್ಟೇ ಚಿಗುರೊಡೆಯುತ್ತಿರುವ ಆಮಾ ಆದ್ಮಿ ಪಕ್ಷ ಮತ್ತು ಇತರೆ ಪಕ್ಷಗಳು ತಲಾ ಶೇ. 2ರಷ್ಟು ಜನರಿಗೆ ಸಮರ್ಥ ಪಕ್ಷ ಎನಿಸಿವೆ. ಮುಂದಿನ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಪ್ರಮುಖ ವಿಷಯ ಎಂದು ಸಮೀಕ್ಷೆಗೊಳಪಟ್ಟ ಮತದಾರರು ಅಭಿಪ್ರಾಯಪಟ್ಟಿದ್ದು, ಇದನ್ನು ಬಗೆಹರಿಸಲು ಬಿಜೆಪಿಯೇ ಸಮರ್ಥ (ಶೇ. 56) ಪಕ್ಷ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಸಮಸ್ಯೆ ನೀಗಿಸಲು ಕಾಂಗ್ರೆಸ್ ಸಮರ್ಥ ಎಂದು ಹೇಳಿದವರು ಶೇ. 33ರಷ್ಟು ಮಂದಿ ಮಾತ್ರ. ಆದರೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೇರಿದ ಆಮ್ ಆದ್ಮಿ ಪಕ್ಷ, ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ, ಜನರ ಮನಸ್ಸಿನಲ್ಲಿ ಅಷ್ಟಾಗಿ ಬೇರೂರಿಲ್ಲ ಎನ್ನುವುದು ಈ ಸಮೀಕ್ಷೆಯಿಂದ ವ್ಯಕ್ತವಾಗಿದೆ.

ಪಕ್ಷ ವರ್ಸಸ್ ಅಭ್ಯರ್ಥಿ: ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸೇ ಮುಖ್ಯವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಶೇ. 55ರಷ್ಟು ಮಂದಿ ಅಭ್ಯರ್ಥಿಂಯೇ ಮುಖ್ಯ ಎಂದು ಹೇಳಿದರೆ, ಶೇ. 45ರಷ್ಟು ಮಂದಿ ಪಕ್ಷ ನೋಡಿಕೊಂಡು ಮತ ಚಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಅಭ್ಯರ್ಥಿಯನ್ನು ಯಾವ ಮಾನದಂಡದಲ್ಲಿ ನೋಡುತ್ತೀರಿ ಎಂದು ಪ್ರಶ್ನಿಸಿದಾಗ, ಶೇ. 83ರಷ್ಟು ಮಂದಿ ಅವರು ಮಾಡಿದ ಕೆಲಸ ನೋಡಿಕೊಂಡು ಚುನಾಯಿಸುತ್ತೇವೆ ಎಂದು ಹೇಳಿರುವುದು ಪ್ರಜಾಸತ್ತೆಯಲ್ಲಿ ಆಶಾಭಾವ ಮೂಡಿಸುವ ಲಕ್ಷಣ. ಶೇ,10ರಷ್ಟು ಮಂದಿ ಅಭ್ಯರ್ಥಿಯ ಬದ್ಧತೆಯನ್ನು ಗಮನಿಸಿದರೆ, ಶೇ.4ರಷ್ಟು ಮಂದಿ ಜಾತಿ ಮತ್ತು ಶೇ,3ರಷ್ಟು ಮಂದಿ ಧರ್ಮವನ್ನು ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com