
ನವದೆಹಲಿ: ಸ್ವಾತಂತ್ರ್ಯಾನಂತರ ನಡೆಸಿದ ಮೊದಲ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ವಿವರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಯಾದರೂ ಜಾತಿವಾರು ಮಾಹಿತಿಯನ್ನು ಬಿಟ್ಟಿದೆ.
ಕೇವಲ ಆರ್ಥಿಕ ವಿವರವನ್ನಷ್ಟೇ ಬಹಿರಂಗಗೊಳಿಸಿದೆ. ಜಾತಿಯಾಧಾರಿತ ವಿವರ ಬಹಿರಂಗಗೊಳಿಸದಿರುವ ಸರ್ಕಾರದ ಈ ನಡೆ ಸಾಕಷ್ಟು ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ. ಬಿಹಾರ ಚುನಾವಣೆಗೆ ಹೆದರಿ ಈ ನಿರ್ಧಾರ ತೆಗೆದು ಕೊಂಡಿದೆ ಎನ್ನುವ ಆರೋಪ ಕೇಳಿಬಂದರೂ ಸರ್ಕಾರ ಮಾತ್ರ ಅದನ್ನು ತಳ್ಳಿಹಾಕಿದೆ. ಪ್ರತಿಯೊಂದನ್ನೂ ಚುನಾವಣೆ ಜತೆಗೆ ತಳಕು ಹಾಕಿ ನೋಡುವುದು ಸರಿಯಲ್ಲ. ಸರ್ಕಾರಕ್ಕೆ ಕೇವಲ ಆರ್ಥಿಕ ವಿವರಗಳಷ್ಟೇ ಮುಖ್ಯ. ಈ ಮೂಲಕ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸಾಧ್ಯವಿದೆ ಎಂದು ಸಚಿವ ಚೌಧರಿ ಬಿರೇಂದ್ರ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಈ ಗಣತಿಗೆ ಚಾಲನೆ ಸಿಕ್ಕಿದ್ದು 2011ರಲ್ಲಿ ಅಂದರೆ ಯುಪಿಎ ಅವಧಿಯಲ್ಲಿ. ಆಗ ಇದು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಈ ಗಣತಿಯನ್ನು ಜಾತಿ ಪ್ರಧಾನವಾಗಿಯೂ ನಡೆಯ ಬೇಕು ಎಂದು ಹಿಂದುಳಿದ ವರ್ಗಗಳ ನಾಯಕರಾದ ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಹಾಗೂ ಶರದ್ ಯಾದವ್ ಒತ್ತಾಯಿಸಿದ್ದರು. ಈ ಮೂಲಕ ಹಿಂದುಳಿದ ವರ್ಗಗಳಿಗೆ ಸರಿಯಾದ ಲೆಕ್ಕಹಾಕಬೇಕೆಂದು ಆಗ್ರಹಿಸಿದ್ದರು.
ಗಣತಿಯ ಪ್ರಮುಖ ಅಂಶಗಳು
*ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಒಟ್ಟಾರೆ ಕುಟುಂಬಗಳು 24.39 ಕೋಟಿ ದೇಶದಲ್ಲಿರುವ 24.39 ಕೋಟಿ ಕುಟುಂಬದಲ್ಲಿ 17.91 ಕೋಟಿ ಕುಟುಂಬ ಗ್ರಾಮಗಳಲ್ಲೇ ಇವೆ.
*ಶೇ.20.69ರಷ್ಟು ಕುಟುಂಬಗಳು ವಾಹನ ಅಥವಾ ಬೋಟ್ ಹೊಂದಿವೆ.
*ಶೇ.94ರಷ್ಟು ಹಳ್ಳಿ ಕುಟುಂಬಗಳು ಸ್ವಂತ ಮನೆ ಹೊಂದಿವೆ. ಇವುಗಳಲ್ಲಿ ಶೇ.54ರಷ್ಟು ಕುಟುಂಬ 1 ಅಥವಾ 2 ಕೋಣೆ ಮನೆಯಲ್ಲಿ ವಾಸಿಸುತ್ತವೆ.
*ಶೇ.70ರಷ್ಟು ಎಸ್ಸಿಗಳು ಹಾಗೂ ಶೇ. 50ರಷ್ಟು ಎಸ್ಟಿ ಸಮುದಾಯಕ್ಕೆ ಸೇರಿದವರಿಗೆ ಸ್ವಂತ ಭೂಮಿ ಇಲ್ಲ.
*ಗ್ರಾಮೀಣ ಪ್ರದೇಶದ ಶೇ.4.6ರಷ್ಟು ಕುಟುಂಬಗಳು ತೆರಿಗೆ ಪಾವತಿಸುತ್ತವೆ.
*2.37 ಕೋಟಿ ಗ್ರಾಮೀಣ ಕುಟುಂಬಗಳು ಒಂದೇ ಕೋಣೆಯ ಮನೆಯಲ್ಲಿ ವಾಸಿಸುತ್ತಿವೆ.
*ಇವು ಕಚ್ಚಾಮನೆಗಳಾಗಿವೆ. ಶೇ.11ರಷ್ಟು ಗ್ರಾಮೀಣ ಕುಟುಂಬಗಳು ಫ್ರಿಡ್ಜ್ ಹೊಂದಿವೆ.
*ದೇಶದ 10.69 ಕೋಟಿ ಕುಟುಂಬಗಳು ಹಿಂದುಳಿದಿವೆ.
*ಗ್ರಾಮೀಣ ಪ್ರದೇಶದಲ್ಲಿ ಶೇ.30ರಷ್ಟು ಎಸ್ಸಿ,ಎಸ್ಟಿ ಕುಟುಂಬಗಳು ವಾಸಿಸುತ್ತಿವೆ.
ಇದೊಂದು ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದ ನಿಖರ ವರದಿಯಾಗಿದೆ. ರಾಜ್ಯ ಸರ್ಕಾರಗಳು ಹಾಗೂ ಇತರೆ ಇಲಾಖೆಗಳು ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಈ ವಿವರವನ್ನು ಬಳಸಿಕೊಳ್ಳಬಹುದಾಗಿದೆ.
-ಚೌಧರಿ ಬಿರೇಂದ್ರ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವ
ಸರ್ಕಾರಿ ಯೋಜನೆಗಳನ್ನು ಯಾರಿಗಾಗಿ ಜಾರಿ ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಈ ಮಾಹಿತಿಗಳು ನೆರವು ನೀಡಲಿವೆ.
-ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ
Advertisement