
ಬೆಂಗಳೂರು: ಅತ್ಯಂತ ತಳಮಟ್ಟವಾದ ಗ್ರಾಮ ಪಂಚಾಯತಿನಿಂದ ಹಿಡಿದು ಸಂಸತ್ತಿನವರೆಗೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಗುರಿ. ಇದಕ್ಕೆ ಕಾರ್ಯಕರ್ತರೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆ ನೀಡಿದ್ದಾರೆ.
ಅವರು ಬೆಂಗಳೂರಿನಲ್ಲಿಂದು ದಕ್ಷಿಣ ಭಾರತದ ಮಹಾಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಉದ್ದೇಶವಾಗಿದೆ ಎಂದರು.
2015ರ ವೇಳೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ತೆರೆಯಲಾಗುವುದು. ಅವು ಕಚೇರಿಗಳಾಗಿರದೆ ಕಾರ್ಯಕರ್ತರ ಭಾವನೆಗಳ ಮಂದಿರವಾಗಲಿದೆ ಎಂದರು. ಜಗನ್ನಾಥ್ ರಾವ್ ಜೋಷಿ ಅವರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.
ಅದೇ ರೀತಿ ಐದು ವರ್ಷ ನಾವು ಕೆಲಸ ಮಾಡಿದರೆ ಪಕ್ಷಕ್ಕೆ ನೆಲೆ ಸಿಗಲಿದೆ ಎಂದು ಹೇಳಿದರು. ಈಗಾಗಲೇ ಕರ್ನಾಟಕದಲ್ಲಿ 11 ಕೋಟಿ ಪಕ್ಷ ಸದಸ್ಯತ್ವ ಮಾಡಲಾಗಿದೆ. ಅದರ ಪರಿಶೀಲನೆಗೆ ಈ ಅಭಿಯಾನ ಕೈಗೊಳ್ಳಲಾಗಿದೆ. 17 ವಿಭಾಗಗಳು ಕಾರ್ಯ ನಿರ್ವಹಿಸುತ್ತಲಿವೆ ಎಂದ ಅವರು, ಕೇಂದ್ರ ಸರ್ಕಾರ 12 ತಿಂಗಳಲ್ಲಿ 24 ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. 14 ಯೋಜನೆಗಳಲ್ಲಿ ಕೇಂದ್ರದೊಂದಿಗೆ ಕಾರ್ಯಕರ್ತರು ಕೈ ಜೋಡಿಸಬೇಕು. ಈ ಬಗ್ಗೆ ನಿರಾಶದಾಯಕ ಪ್ರತಿಕ್ರಿಯೆ ಬರಬಾರದು ಎಂದರು.
ಪಾಂಡಿಚೆರಿ, ತಮಿಳುನಾಡು, ಕೇರಳ, ಲಕ್ಷದ್ವೀಪ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಕರ್ನಾಟಕ ಹಾಗೂ ರಾಜ್ಯ ಪ್ರತಿನಿಧಿಸುವ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ಮಹಾಸಂಪರ್ಕ ಅಭಿಯಾನದ ಪ್ರಗತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಸಂಸದರು, ಸಚಿವರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ದೇಶಾದ್ಯಂತ ಇದುವರೆಗೆ ನಡೆಸಿದ ಸದಸ್ಯತ್ವ ಅಭಿಯಾನದಲ್ಲಿ ಬಿಜೆಪಿ ಸುಮಾರು 10 ಕೋಟಿ ಸದಸ್ಯರನ್ನು ಹೊಂದಿದ್ದು, ಸದಸ್ಯರಾದವರನ್ನು ಕಾರ್ಯಕರ್ತರನ್ನಾಗಿ ಹಾಗೂ ಕಾರ್ಯಕರ್ತರನ್ನು ಸಕ್ರೀಯ ಕಾರ್ಯಕರ್ತರನ್ನಾಗಿ ಮಾಡುವುದೇ ಅಭಿಯಾನದ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ ಪದಾಧಿಕಾರಿಗಳು ಇಂದು ಅಭಿಯಾನದಲ್ಲಿ ತಮ್ಮ ವರದಿಯನ್ನು ಮಂಡಿಸಿದರು. ಮುಂಬರುವ ಕರ್ನಾಟಕದ ಬಿಬಿಎಂಪಿ ಚುನಾವಣೆ ಬಗ್ಗೆಯೂ ಸಹ ಚರ್ಚೆ ನಡೆಸಲಾಯಿತು.
Advertisement