ವಿಧಾನಸಭೆಯಲ್ಲಿ ಲೋಕಾಯುಕ್ತ ತಿದ್ದುಪಡಿ ವಿಧೇಯಕ ಮಂಡನೆ

ವಿವಾದಿತ ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ...
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ

ಬೆಂಗಳೂರು/ವಿಧಾನಸಭೆ: ವಿವಾದಿತ ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಇಂದು ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಪ್ರತಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಕೇಸ್ ದಾಖಲಿಸಲು ಸದನದ ಅನುಮತಿ ಪಡೆಯುವ ಹಾಗೂ ಶಾಸಕರ ಮೇಲೆ ಕೇಸ್ ದಾಖಲಿಸಲು ಸ್ಪೀಕರ್ ಹಾಗೂ ಪರಿಷತ್ ಸಭಾಪತಿಗಳ ಅನುಮತಿ ಪಡೆಯಬೇಕು ಎಂಬ ಪ್ರಸ್ತಾಪವನ್ನು ಕೈ ಬಿಡಲಾಗಿದೆ.

ಹಾಲಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ವಿರುದ್ಧ ವ್ಯಕ್ತವಾಗಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತರ ಪದಚ್ಯುತಿಗೆ ಕಾನೂನು ತಿದ್ದುಪಡಿ ಮಾಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ಸರ್ಕಾರ ಸಮಗ್ರ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಆದನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.

ಸರ್ಕಾರ ಮಂಡಿಸಿರುವ ಸಮಗ್ರ ಲೋಕಾಯುಕ್ತ ತಿದ್ದುಪಡಿಯಲ್ಲಿ ಕಾಯ್ದೆಯಲ್ಲಿ ಕೆಲವು ವಿಚಾರಗಳಿದ್ದು, ಅದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ವಿಧೇಯಕದಲ್ಲಿದ್ದ ವಿವಾದಾತ್ಮಕ ವಿಚಾರಗಳು

  • ಇನ್ನು ಮುಂದೆ ಲೋಕಾಯುಕ್ತರು ಭ್ರಷ್ಟಾಚಾರ ಪ್ರಕರಣಗಳಿಗೆ ಮಾತ್ರ ಸೀಮಿತವಾಗುತ್ತಾರೆ. ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸುವಂತಿಲ್ಲ.
  • ಮುಖ್ಯಮಂತ್ರಿಗಳ ವಿರುದ್ಧ ಆರೋಪ ಬಂದರೆ, ತನಿಖೆ ನಡೆಸುವುದಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆಯಬೇಕಾಗಿಲ್ಲ. ಅದರ ಬದಲಾಗಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಆ ಅಧಿಕಾರಿ ವರ್ಗಾಯಿಸಲ್ಪಡುತ್ತದೆ. ಮುಖ್ಯಮಂತ್ರಿ ವಿಧಾನಸಭೆ ಸದಸ್ಯನಾದರೆ ಸ್ಪೀಕರ್, ವಿಧಾನ ಪರಿಷತ್ ಸದಸ್ಯನಾದರೆ ಸಭಾಪತಿಗಳ ಒಪ್ಪಿಗೆ ಅಗತ್ಯ. ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧ ತನಿಖೆ ನಡೆಸುವುದಕ್ಕೂ ಇದೇ ಸೂತ್ರ ಅನ್ವಯ.
  • ಲೋಕಾಯುಕ್ತರ ಮತ್ತು ಉಪ ಲೋಕಾಯುಕ್ತರ ನೇಮಕಕ್ಕೆ ಇರುವ ಕೆಲ ಅಂಶಗಳಲ್ಲಿ ಬದಲಾವಣೆ. ಲೋಕಾಯುಕ್ತರ ಹುದ್ದೆಗೆ ನೇಮಕಗೊಳ್ಳುವ ವ್ಯಕ್ತಿ ಇನ್ನು ಮುಂದೆ ಹೈಕೋರ್ಟ್‌ನ ಮುಖ್ಯ ನ್ಯಾಯಧೀಶನಾಗಿ ಕೆಲಸ ಮಾಡಿರಬೇಕು ಎಂಬ ನಿಬಂಧನೆ ಕೈ ಬಿಡಲಾಗಿದ್ದು 10 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಧೀಶನಾಗಿ ಕರ್ತವ್ಯ ಸಲ್ಲಿಸಿದ್ದರೆ ಸಾಕು.
  • ನ್ಯಾಯದೀಶರ ವಿಚಾರಣೆ ಕಾಯ್ದೆ ಪ್ರಕಾರ ಲೋಕಾಯುಕ್ತರ ಪದಚ್ಯುತಿ ವಿಧಾನವನ್ನು ಸರಳೀಕರಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಸರಳ ಬಹುಮತದೊಂದಿಗೆ ಲೋಕಾಯುಕ್ತರ ಪದಚ್ಯುತಿಗೆ ತೆಗೆದುಕೊಂಡ ನಿರ್ಣಯಕ್ಕೆ ರಾಜ್ಯಪಾಲರು ಸಹಿ ಹಾಕುವ ಮೂಲಕ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರನ್ನು ಪದಚ್ಯುತಿ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com