ಅಕ್ರಮಕಾರ್ಡ್ ವಾಪಸ್ ಕೊಡದಿದ್ರೆ ಕ್ರಿಮಿನಲ್ ಕೇಸ್

ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಜು.31ರೊಳಗೆ ಅವುಗಳನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ, ಆ. 1ರಿಂದ ಅಂತಹ ಕಾರ್ಡ್ ದಾರರನ್ನು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು, ಇದು ಅಂತಿಮ ಎಚ್ಚರಿಕೆ ಎಂದು...
ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್
ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಜು.31ರೊಳಗೆ ಅವುಗಳನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ, ಆ. 1ರಿಂದ ಅಂತಹ ಕಾರ್ಡ್ ದಾರರನ್ನು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು, ಇದು ಅಂತಿಮ ಎಚ್ಚರಿಕೆ ಎಂದು ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ, ಸರ್ಕಾರಿ ನೌಕರರೂ ಸೇರಿದಂತೆ ಹಲವು ಜನರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್‍ಗಳನ್ನು ಹೊಂದಿದ್ದಾರೆ. ಅವುಗಳನ್ನು ವಾಪಸ್ ನೀಡಿ ಎಂದು ಹಲವು ಬಾರಿ ಸೂಚನೆ ನೀಡಲಾಗಿತ್ತು. ಇದೀಗ ಅದರ ಗಡುವು ಜುಲೈ 31ಕ್ಕೆ ಅಂತ್ಯವಾಗುತ್ತಿದ್ದು ಆವರೆಗೆ ಅಕ್ರಮ ಕಾರ್ಡ್‍ಗಳನ್ನುವಾಪಸ್ ನೀಡದಿದ್ದರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಆ.1ರಿಂದ ಮೂರ್ನಾಲ್ಕು ತಿಂಗಳು ಅಕ್ರಮ ಹಾಗೂ ಬೋಗಸ್ ಕಾರ್ಡ್‍ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಆಂದೋಲನದ ರೀತಿ ಯಲ್ಲಿ ಕಾರ್ಯನಿರ್ವಹಿಸಲು ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಮೈಸೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರೊಬ್ಬರು ಬಿಪಿಎಲ್ ಕಾರ್ಡ್ ಹೊಂದಿದ್ದರು. ಅದನ್ನು ಪರಿಶೀಲಿಸಿ ಅವರು ಈವರೆಗೆ ಪಡೆದಿದ್ದ ಆಹಾರಧಾನ್ಯಗಳ ಮೊತ್ತವನ್ನು ಗಣನೆ ಮಾಡಿಅವರಿಂದ ರು.16 ಸಾವಿರವನ್ನು ವಸೂಲಿ ಮಾಡಲಾಯಿತು.

ಫುಡ್ ಇನ್ಸ್‍ಪೆಕ್ಟರ್ ಹಾಗೂ ಉಪ ತಹಸೀಲ್ದಾರ್ ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಗಮನಕ್ಕೆ ಬಂದು, ಅವರಿಂದಲೂ ಈ ರೀತಿಯಲ್ಲಿ ಸಾವಿರಾರು ರುಪಾಯಿ ವಸೂಲಿ ಮಾಡಿ ಎಚ್ಚರಿಕೆ ನೀಡಲಾಗಿದೆ. ಈ ಜು.31ರೊಳಗೆ ಅಕ್ರಮ ಕಾರ್ಡ್‍ಗಳನ್ನು ವಾಪಸ್ ನೀಡದಿದ್ದರೆ ಅವರಿಗೆ ಎಚ್ಚರಿಕೆ ಅಥವಾ ಹಣ ವಸೂಲಿ ಮಾಡುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರ ನೀಡಿದರು. ಆ.1ರಿಂದ ಅಕ್ರಮ ಹಾಗೂ ಬೋಗಸ್ ಕಾರ್ಡ್‍ಗಳ ತಪಾಸಣೆಗಾಗಿ ವಿಚಕ್ಷಣ ತಂಡವನ್ನೇ ರಚಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಈ ಮೂಲಕ ಅಕ್ರಮ ಸೇರಿದಂತೆ ಬೋಗಸ್ ಕಾರ್ಡ್‍ಗಳ ಮಾಹಿತಿಯೂ ಲಭ್ಯವಾಗಲಿದೆ. ಮೂರ್ನಾಲ್ಕು ತಿಂಗಳಲ್ಲಿ ಇವೆಲ್ಲವನ್ನೂ ನಿವಾರಿಸಿ ಅರ್ಹ ಫಲಾನುಭವಿಗಳನ್ನು ಇಲಾಖೆ ನಿರ್ಧರಿಸಲಿದೆ ಎಂದರು. ಹೊಸ ಪಡಿತರ ಚೀಟಿಗಳನ್ನು ನೀಡುವ ಕಾರ್ಯವೂ ನಡೆದಿದ್ದು, ಸುಮಾರು 6.5 ಲಕ್ಷ ಅರ್ಜಿಗಳು ಬಂದಿವೆ. ಹೊಸ ಪಡಿತರ ಚೀಟಿಯನ್ನು ವಿತರಿಸುವ ಕಾರ್ಯವೂ ಆರಂಭವಾಗಿದೆ. ಹೆಚ್ಚು ಒತ್ತಡ ಇರುವ ನಗರಗಳಲ್ಲಿ ಹೆಚ್ಚಿನ ಕೇಂದ್ರಗಳನ್ನು ಹೊಸ ಅರ್ಜಿ ಪಡೆಯುವುದಕ್ಕೆ ತೆರೆಯಲಾಗಿದೆ.

ಈಗಿರುವ ಪಡಿತರ ಚೀಟಿಗಳಿಗೆ ಸುಮಾರು 2 ಕೋಟಿ ಜನ ಆಧಾರ್ ಹಾಗೂ ಎಪಿಕ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ. ಈ ದಾಖಲೆಗಳನ್ನು ತಾಲೂಕು ಮಟ್ಟದಲ್ಲಿ ಈಗಿರುವ ಕಾರ್ಡ್‍ಗಳಿಗೆ ಸೀಡಿಂಗ್ ಮಾಡುವ ಕಾರ್ಯ ತಾಲೂಕು ಮಟ್ಟದಲ್ಲೇ ನಡೆಯಲಿದೆ. 2-3 ಮೂರು ತಿಂಗಳಲ್ಲಿ ಈ ಸೀಡಿಂಗ್ ಕಾರ್ಯ ಮುಗಿಯಲಿದ್ದು, ನಂತರ ಅಕ್ರಮ ಹಾಗೂ ಡುಪ್ಲಿಕೇಟ್ ಕಾರ್ಡ್‍ಗಳ ಮÁಹಿತಿ ಸಂಪೂರ್ಣ ಲಭ್ಯವಾಗಲಿದೆ ಎಂದರು.

ಪಡಿತರ ಅಂಗಡಿಗೆ ಸಾರಿಗೆ: ತಾಲೂಕು ಸಗಟು ಕೇಂದ್ರದಿಂದ  ಆಹಾರ ಧಾನ್ಯಗಳನ್ನು ಸಾಗಣೆ ಮಾಡುವ ಪ್ರಕ್ರಿಯೆಯನ್ನು ಆಯಾ ಪಡಿತರ ಅಂಗಡಿಗಳಿಗೇ ಈವರೆಗೆ ವಹಿಸಲಾಗಿತ್ತು. ಇನ್ನು ಮುಂದೆ ಈ ವ್ಯವಸ್ಥೆಯನ್ನು ಬದಲಾಯಿಸಿ, ಇಲಾಖೆಯಿಂದ ಸಾಗಣೆಗೆ ಟೆಂಡರ್ ಕರೆದು ಕೇಂದ್ರೀಕೃತವಾಗಿ ಈ ಕಾರ್ಯ ನಿರ್ವಹಿಸಲಾಗುತ್ತದೆ. ತಾಲೂಕು ಸಗಟು ಕೇಂದ್ರದಿಂದ ಗಣೆ
ಗುತ್ತಿಗೆದಾರರು ಪಡಿತರ ಅಂಗಡಿಗಳಿಗೆ ಆಹಾರ ಧಾನ್ಯ ವಿತರಿಸಲಿದ್ದಾರೆ. ಇದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಸಾಕಷ್ಟು ಉಳಿತಾಯವಾಗುವ ಜತೆಗೆ, ಎಲ್ಲಿಗೆ ಎಷ್ಟು ಆಹಾರಧಾನ್ಯ
ಯಾವಾಗ ಹೋಯಿತು ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಕೇಂದ್ರದ 52 ದಾಸ್ತಾನು ಕೇಂದ್ರಗಳಿದ್ದು, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರಿನ ಕೆಆರ್.ಪುರ, ವೈಟ್ ಫೀಲ್ಡ್ ನಲ್ಲಿ ಇದೀಗ ಆನ್‍ಲೈನ್ ಪ್ರಕ್ರಿಯೆ ಆರಂಭವಾಗುತ್ತದೆ. ಇದನ್ನು ನಮ್ಮ ಸಾಫ್ಟ್ ವೇರ್‍ಗೆ ಲಿಂಕ್ ಮಾಡಿ ಸೋರಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದೆಲ್ಲೆಡೆ ಇದೇ ವ್ಯವಸ್ಥೆ ಅನುಷ್ಠಾನವಾಗಲಿದೆ ಎಂದರು.

ಸಿವಿಕ್ ಸಂಸ್ಥೆ ವತಿಯಿಂದ ಸಾರ್ವಜನಿಕ ಪಡಿತರ ವ್ಯವಸ್ಥೆ ಬಗ್ಗೆ ಪ್ರಕಟಿಸಲಾಗಿರುವ ಕೈಪಿಡಿಯನ್ನು ಸಚಿವ ದಿನೇಶ್ ಗುಂಡೂ ರಾವ್ ಅವರು ಬಿಡುಗಡೆ ಮಾಡಿದರು. ಸಿವಿಕ್ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಪಡಿತರ ಚೀಟಿ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಹೊಸ ಪಡಿತರ ಚೀಟಿ ವಿತರಿಸುವ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಆ.1ರಿಂದ ಎಸ್‍ಎಂಎಸ್ ಮೂಲಕ ಪಡಿತರ ಮಾಹಿತಿ

ಪಡಿತರ ಚೀಟಿದಾರರಿಗೆ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣ ಹಾಗೂ ಅದರ ಬೆಲೆಯನ್ನು ಎಸ್‍ಎಂಎಸ್ ಮೂಲಕ ಅವರಿಗೆ ಒದಗಿಸುವ ಯೋಜನೆಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಗಸ್ಟ್ 1ರಿಂದ ಜಾರಿಗೊಳಿಸಲಿದೆ. ರಾಜ್ಯದಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಸೇರಿ ಸುಮಾರು 80 ಲಕ್ಷ ಪಡಿತರ ಚೀಟಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಪ್ರತಿ ತಿಂಗಳು ಲಭ್ಯವಾಗುವ ಆಹಾರ ಧಾನ್ಯಗಳ ಪ್ರಮಾಣವನ್ನು ಎಸ್‍ಎಂಎಸ್ ಮೂಲಕ ಕಳುಹಿಸ ಲಾಗುತ್ತದೆ. ಆ ಪಡಿತರ ಚೀಟಿಗೆ ಎಷ್ಟು ಅಕ್ಕಿ, ರಾಗಿ ಅಥವಾ ಜೋಳ ಲಭ್ಯ, ಗೋದಿ, ಸಕ್ಕರೆ, ಉಪ್ಪು, ತಾಳೆ ಎಣ್ಣೆ ಎಷ್ಟು ಪ್ರಮಾಣ ಹಾಗೂ ಬೆಲೆಯನ್ನೂ ನಮೂದಿಸಿ ಕಳುಹಿಸಲಾಗುತ್ತಿದೆ. ಈ ಮಾಹಿತಿ ಕನ್ನಡದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com