"ಮಿಸೈಲ್ ಮ್ಯಾನ್" ಹಾದಿ

ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಬಹುಶಃ ಈ ಹೆಸರು ಭಾರತ ದೇಶದ ಇತಿಹಾಸ ಇರುವವರೆಗೂ ಯಾರೂ ಮರೆಯುವುದಿಲ್ಲ. ಭಾರತದ ಹೆಮ್ಮೆಯಂತಿದ್ದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಎ.ಪಿ.ಜೆ ಅಬ್ದುಲ್ ಕಲಾಂ ಇಂದು ವಿಧಿವಶರಾಗಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ

ನವದೆಹಲಿ: ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಬಹುಶಃ ಈ ಹೆಸರು ಭಾರತ ದೇಶದ ಇತಿಹಾಸ ಇರುವವರೆಗೂ ಯಾರೂ ಮರೆಯುವುದಿಲ್ಲ. ಭಾರತದ ಹೆಮ್ಮೆಯಂತಿದ್ದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಎ.ಪಿ.ಜೆ ಅಬ್ದುಲ್ ಕಲಾಂ ಇಂದು ವಿಧಿವಶರಾಗಿದ್ದಾರೆ.

ಭಾರತ ಗಣರಾಜ್ಯದ ಮಾಜಿ ರಾಷ್ಟ್ರಪತಿ. ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ; ತತ್ತ್ವಜ್ಞ, ಭಾರತರತ್ನ ಪ್ರಶಸ್ತಿ ಪುರಸ್ಕೃತರು. ಇವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದಾದರೂ ಅಬ್ದುಲ್ ಕಲಾಂ ಎಂದೇ ಪ್ರಸಿದ್ಧರಾದವರು. ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931 ಅಕ್ಟೋಬರ್ 15ರಂದು ಜನಿಸಿದರು. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಬಾಲ್ಯದಿಂದಲೇ ಕಷ್ಟಸಹಿಷ್ಣುತೆಯನ್ನು ಮೈಗೂಡಿಸಿಕೊಂಡವರು. ಪತ್ರಿಕೆಗಳನ್ನು ಮನೆಮನೆಗೆ ಹಂಚುವ ಕೆಲಸ ಮಾಡುತ್ತಲೇ ಶಾಲೆಗೆ ಹೋಗುತ್ತಿದ್ದರು. ಕಲಾಂ ಅವರಿಗೆ ಗಣಿತ-ವಿಜ್ಞಾನದ ಬಗ್ಗೆ ವಿಶೇಷ ಒಲವಿತ್ತು. ಇದನ್ನು ಸ್ವತಃ ಅವರ  ಅಧ್ಯಾಪಕರು ಗುರುತಿಸಿ ಪ್ರೋತ್ಸಾಹಿಸಿದ್ದರು.

ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಕಾಲೇಜು ಶಿಕ್ಷಣಕ್ಕೆ ಸೇರಿದ ಕಲಾಂ ಅವರು ೧೯೫೪ರಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಇವರ ಆಸಕ್ತಿಯ ವಿಷಯವಾಗಿದ್ದ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ಮಾಡಲು ಚೆನ್ನೈನ ‘ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಸಂಸ್ಥೆ ಸೇರಿದರು. ಆ ವಿಷಯದಲ್ಲಿ ಪದವಿ ಪಡೆದ ಕಲಾಂ ಅವರು ದೇಶದ ಪ್ರತಿಷ್ಠಿತ ಡಿಆರ್ ಡಿಓ (Defence Research and Development Organization) ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಸೇರಿದ್ದರು. ಬಳಿಕ ಏರೋ ಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಬ್ದುಲ್ ಕಲಾಂ ಅವರು ಡಾಕ್ಟರೇಟ್ ಪದವಿ ಪಡೆದರು.

ಇದೇ ವೇಳೆ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಅಬ್ದುಲ್ ಕಲಾಂ ಅವರಿಗೆ ದೊರೆಯಿತು. ವಿಕ್ರಮ್ ಸಾರಾಭಾಯಿಯಂತಹ ಪ್ರತಿಭಾವಂತ ವಿಜ್ಞಾನಿಗಳ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ ಕಲಾಂ ಅವರಿಗೆ ದೊರೆಯಿತು. 1969ರಲ್ಲಿ ಕಲಾಂ ಅವರನ್ನು ಪ್ರಸಿದ್ಧ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊಗೆ ವರ್ಗಾವಣೆ ಮಾಡಲಾಯಿತು. ಆ ಮೂಲಕ ಕಲಾಂ ಅವರು ದೇಶದ ಪ್ರಪ್ರಥಮ ಉಪಗ್ರಹ ಉಡಾವಣಾವಾಹನದ (SLV) ರೂಪುರೇಷೆ ನಿರ್ಮಿಸುವ ಮಹತ್ವದ ಕಾರ್ಯದಲ್ಲಿ ಭಾಗಿಯಾದರು. ಇನ್ನು 1980ರಲ್ಲಿ ಕಲಾಂ ಅವರು ಪ್ರಧಾನ ಪಾತ್ರ ನಿರ್ವಹಿಸಿ ವಿನ್ಯಾಸಗೊಳಿಸಿದ್ದ ವಿಶೇಷ ರಾಕೆಟ್ ಮೂಲಕ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು.

ಪೋಖ್ರಾನ್ ನಲ್ಲಿ ನಡೆಸಿದ ಅಣ್ವಸ್ತ್ರ ಪ್ರಯೋಗ ಕಾಲದಲ್ಲಿಯೂ ಕಲಾಂ ಅವರು, ರಾಜಾರಾಮಣ್ಣ ಅವರ ಆಹ್ವಾನದ ಮೇರೆಗೆ ಸ್ಥಳದಲ್ಲಿ ಉಪಸ್ಥಿತರಿದ್ದರು. ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಸಿದ್ಧತೆಗಳಲ್ಲಿಯೂ ಕಲಾಂ ಅವರ ಪಾತ್ರ ಮಹತ್ವದ್ದಾಗಿತ್ತು. 1992-1999ರ ವರೆಗೂ ಭಾರತದ ಪ್ರಧಾನಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿಯೂ, ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಅಣುವಿಜ್ಞಾನಿ, ರಾಕೆಟ್ ವಿಜ್ಞಾನಿ ಹಾಗೂ ಬಾಹ್ಯಾಕಾಶ ತಜ್ಞರಾಗಿ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದರು. ದೇಶೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ಮತ್ತು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಭೂಷಣ (1981), ಪದ್ಮವಿಭೂಷಣ (1990) ಹಾಗೂ ಭಾರತರತ್ನ (1997) ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.

ಅಬ್ದುಲ್ ಕಲಾಂ ಅವರನ್ನು ಭಾರತದ ಗಣರಾಜ್ಯದ 11ನೆಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಲಾಯಿತು. 2002ರ ಜುಲೈ 25 ರಿಂದ 2007 ಜುಲೈ 24ರ ವರೆಗೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ತಮ್ಮ ಸರಳತೆ, ಪ್ರಾಮಾಣಿಕತೆಯಿಂದಲೇ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದರು. ಬ್ರಹ್ಮಚಾರಿಯಾಗಿದ್ದ ಕಲಾಂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಹೀಗಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ ‘ವಿಂಗ್ಸ್‌ ಆಫ್ ಫೈರ್’ ಎಂಬ ಆತ್ಮಕಥೆಯನ್ನು ರಚಿಸಿದ್ದಾರೆ. ಇನ್ನು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ 2020’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ತಮ್ಮದೇ ಆದ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com