ಜಗತ್ತಿಗೆ ತಿಳಿಯದೇ ಹೋದ ಅಣು ಹಾದಿ!

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಕೆಲ ಮಾಹಿತಿಗಳು ಇಲ್ಲಿವೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ
Updated on

ನವದೆಹಲಿ: ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಕೆಲ ಮಾಹಿತಿಗಳು ಇಲ್ಲಿವೆ.

"ಬೇರೆಯವರಿಗಷ್ಟೇ ಅಲ್ಲ, ನಮಗೂ ಜಗತ್ತನ್ನು ಹಾದಿತಪ್ಪಿಸಲು ಬರುತ್ತೆ ಎಂಬುದನ್ನು ತೋರಿಸಿದ ದಿನಗಳವು, ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಕೇವಲ 2 ದಿನ ಮಾತ್ರ ಬಾಕಿ ಉಳಿದಿದ್ದವು. ಬೇರೆ ಬೇರೆ ದೇಶಗಳ 'ಪತ್ತೇದಾರಿ'ಗಳನ್ನು ದಾರಿ ತಪ್ಪಿಸಬೇಕಾಗಿತ್ತು. ಇದಕ್ಕಾಗಿಯೇ ಸರಣಿಯೋಪಾದಿಯಲ್ಲಿ ಕ್ಷಿಪಣಿ, ರಾಕೆಟ್‌ಗಳು ಮತ್ತು ಪ್ರಯೋಗಕಾರಿ ಬಾಂಬ್‌ಗಳನ್ನು ಉಡಾಯಿಸಿದ್ದೆವು" ಎಂದು ಕಲಾಂ ಹೇಳಿಕೊಂಡಿದ್ದರು. ಭಾರತೀಯ ಗುಪ್ತಚರ ಸಂಸ್ಥೆ "ರಾ" 2013ರ ಜನವರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಬ್ದುಲ್ ಕಲಾಂ ಅವರು, ಯೋಜನೆ ಕುರಿತಂತೆ ಪ್ರಪ್ರಥಮ ಬಾರಿಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು.

ಅಣ್ವಸ್ತ್ರ ಪರೀಕ್ಷೆ ನಡೆಸುವಂತೆ ಸೂಚಿಸಿದ್ದು ನರಸಿಂಹರಾವ್
"ಭಾರತದ ಕ್ಷಿಪಣಿ ಜನಕ ಎಂದೇ ಖ್ಯಾತಿವೆತ್ತಿರುವ ಅಬ್ದುಲ್ ಕಲಾಂ ಅವರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸುವಂತೆ ಸೂಚಿಸಿದ್ದು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್. 1996ನೇ ಇಸವಿಯದು. ಲೋಕಸಭೆ ಚುನಾವಣೆ ನಡೆದು, ಫಲಿತಾಂಶಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದ್ದವು. ಆಗ ನರಸಿಂಹರಾವ್ ಅವರು ನನ್ನನ್ನು ಕರೆದು ಅಣ್ವಸ್ತ್ರ ಪರೀಕ್ಷೆಗೆ ಅಣಿಯಾಗುವಂತೆ ಸೂಚಿಸಿದ್ದರು. ಆದರೆ ಫಲಿತಾಂಶ ಹೊರಬಿದ್ದು, ನರಸಿಂಹರಾವ್ ಸರ್ಕಾರ ಸೋತಿತ್ತು. ಬಳಿಕ ಮತ್ತೆ ಕರೆದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆ ನೆನೆಗುದಿಗೆ ಸರಿಯುವುದು ಬೇಡ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ಯೋಜನೆ ಬಗ್ಗೆ ಮನವರಿಕೆ ಮಾಡಿ. ಯೋಜನೆ ಫಲಕಾರಿಯಾಗುವಂತೆ ಮಾಡಿ ಎಂದು ಹೇಳಿದ್ದರು.ಇದರಂತೆ ನಾವು ವಾಜಪೇಯಿ ಅವರಿಗೆ ಯೋಜನೆ ಬಗ್ಗೆ ಹೇಳಿದ್ದೆವು".

ದಾರಿ ತಪ್ಪಿಸಿದ್ದು ಹೇಗೆ?
"ಇದು ತೀರಾ ಇಂಟರೆಸ್ಟಿಂಗ್. ವಿದೇಶಿ ಗೂಢಾಚಾರರು ನಮ್ಮನ್ನು ಹದ್ದಿನ ಕಣ್ಣಿಂದ ಕಾಯುತ್ತಿದ್ದರು. ಇವರನ್ನು ದಾರಿ ತಪ್ಪಿಸಲೇಬೇಕಿತ್ತು. 1998ರ ಮೇ 11ಕ್ಕೆ ಪರೀಕ್ಷೆಗಾಗಿ ದಿನ ನಿಗದಿಯಾಗಿತ್ತು. ಮೇ 9 ರಿಂದಲೇ ಸಿದ್ಧತೆ ಆರಂಭಿಸಿದ್ದೆವು. ನಮಗೆ ಕತ್ತಲೆ ಬೆಳಕಿನ ವ್ಯತ್ಯಾಸವೇ ಗೊತ್ತಿರಲಿಲ್ಲ. ಆದರೆ ಜಗತ್ತು ಮಾತ್ರ ನಿದ್ರಿಸುತ್ತಿತ್ತು. ಮೇ 10 ರಂದು ಅತ್ತ ಚಾಂದೀಪುರ ಪರೀಕ್ಷಾರ್ಥ ಕೇಂದ್ರದಲ್ಲಿ 12 ತ್ರಿಶೂಲ್‌ಗಳನ್ನು ಉಡಾವಣೆ ಮಾಡಲಾಗಿತ್ತು. ಪ್ರತಿ ಎರಡು ಗಂಟೆಗೊಂದರಂತೆ ಉಡಾವಣೆಗೊಳ್ಳುತ್ತಿದ್ದವು. ಅದೇ ಸಂದರ್ಭದಲ್ಲಿ ದೂರದಲ್ಲಿ ಅಗ್ನಿ ಕ್ಷಿಪಣಿ ಉಡಾವಣೆಯಾಗಿತ್ತು. ಅದೇ ಸಂದರ್ಭದಲ್ಲಿ ಪೋಖ್ರಾನ್ ರೇಂಜ್‌ನಲ್ಲೇ ಹಲವಾರು ರಾಕೆಟ್‌ಗಳನ್ನೂ ಹಾರಿಸಿದ್ದೆವು. ಪಿನಾಕ ಟೈಪ್‌ನಲ್ಲಿ ಮಧ್ಯಾಹ್ನ ಮತ್ತು ಸಂಜೆ ವಾಯು ಸೇನೆ ರನ್‌ವೇನಲ್ಲಿ ಬಾಂಬ್ ಸುರಿಸಿ ಪ್ರಯೋಗ ನಡೆಸಿತ್ತು. ಇದೆಲ್ಲವನ್ನು ಮಾಡಿದ್ದು, ಜಗತ್ತಿನ ದೃಷ್ಟಿ ಈ ಕಡೆ ಇರಲಿ ಎಂಬ ಕಾರಣಕ್ಕಾಗಿಯೇ" ಎಂದು ಕಲಾಂ ಹೇಳಿದ್ದರು..

"ಆದರೆ ಮುಂದಿನ ದಿನ, ಅಂದರೆ 11 ರಂದು ಭಾರತ 3 ನ್ಯೂಕ್ಲಿಯರ್ ಟೆಸ್ಟ್ ಮಾಡುತ್ತೆ ಎಂದು ಯಾರಿಗೂ ಗೊತ್ತಿರಲಿಲ್ಲ. ಇದು ಗೊತ್ತಿದ್ದದ್ದು ಕೇವಲ ಮೂವರಿಗೆ ಮಾತ್ರ. ಎಲ್ಲಾ ಸಂಗತಿಗಳನ್ನೂ ಕಗ್ಗತ್ತಲಲ್ಲಿ ಇಟ್ಟಿದ್ದೆವು ಎಂದು ಕಲಾಂ ಹೇಳಿದ್ದರು.

ಕ್ಷಮಿಸೋಲ್ಲ, ಮರೆಯೋಲ್ಲ ಭಾವನೆ ಹೊಂದಿ
ಭಯೋತ್ಪಾದಕರನ್ನು ಮಟ್ಟ ಹಾಕುವ ಸಂಬಂಧ ಭಾರತ 'ಎಂದಿಗೂ ಕ್ಷಮಿಸಲ್ಲ, ಎಂದಿಗೂ ಮರೆಯೋಲ್ಲ' ಎಂಬ ಮನೋಭಾವ ಹೊಂದಬೇಕು ಎಂದು ಕಲಾಂ ಕರೆ ನೀಡಿದ್ದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇದೇ ಮನೋಭಾವ ಹೊಂದಿವೆ. ಹೀಗಾಗಿ ಭಾರತ ಸಹ ಈ ದೇಶಗಳ ಜೊತೆಗೆ ಸೇರಿಕೊಂಡು ಉಗ್ರವಾದ ಅಳಿಸಿಹಾಕುವ ಸಂಬಂಧ ಕಾರ್ಯಪಡೆಯೊಂದನ್ನು ನಿರ್ಮಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com