ಕಲಾಂ ನಿಧನ: ಶಿಷ್ಟಾಚಾರ ಲೆಕ್ಕಿಸದೇ ಗೌರವ ತೋರಿದ ಗಣ್ಯರು

ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಗಿತ್ತು. ಅಮೂಲ್ಯ ರತ್ನವೊಂದನ್ನು ಕಳೆದು ಕೊಂಡ ನೋವು ಜನಮಾನಸದಲ್ಲಿ ಮಡುಗಟ್ಟಿತ್ತು. ಭಾರತೀಯರ ಕಣ್ಮಣಿಯಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ...
ಕಲಾಂ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಲಾಂ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
Updated on

ನವದೆಹಲಿ: ಮಂಗಳವಾರ ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಗಿತ್ತು. ಅಮೂಲ್ಯ ರತ್ನವೊಂದನ್ನು ಕಳೆದು ಕೊಂಡ ನೋವು ಜನಮಾನಸದಲ್ಲಿ ಮಡುಗಟ್ಟಿತ್ತು. ಭಾರತೀಯರ ಕಣ್ಮಣಿಯಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಿಧನದ ಸುದ್ದಿ ದೇಶದ ಜನತೆಯನ್ನು ದುಃಖದ ಕಡಲಲ್ಲಿ ಮುಳುಗಿಸಿತ್ತು.

ತಮ್ಮ ನೆಚ್ಚಿನ ರಾಷ್ಟ್ರಪತಿಯ ಅಂತಿಮ ದರ್ಶನಕ್ಕಾಗಿ ಮಂಗಳವಾರ ಬೆಳಗ್ಗಿನಿಂದಲೇ ದೆಹಲಿಯಲ್ಲಿ ಜನಸಾಗರ ನೆರೆದಿತ್ತು. ಕಲಾಂ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ವಿಮಾನ  ಮಧ್ಯಾಹ್ನ ಗುವಾಹಟಿಯಿಂದ ದೆಹಲಿಗೆ ಬಂದಾಗ, ಪಾಲಂ ವಿಮಾನ ನಿಲ್ದಾಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಅತ್ತ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರ ಬದಿಗಿಟ್ಟು ನೇರವಾಗಿ ವಿಮಾನ ನಿಲ್ದಾಣಕ್ಕೇ ಆಗಮಿಸಿ ಕ್ಷಿಪಣಿ ಮಾನವನಿಗೆ ಗೌರವ ಸಲ್ಲಿಸಿದರೆ,  ಇತ್ತ ದೇಶದ ಮೂಲೆ ಮೂಲೆಗಳಲ್ಲೂ ಚಿಣ್ಣರಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ಮಾಜಿ ರಾಷ್ಟ್ರಪತಿಯು ಇನ್ನಿಲ್ಲವೆಂದು ಕಣ್ಣೀರಿಟ್ಟರು. ಶಾಲೆ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಸಂಘ  ಸಂಸ್ಥೆಗಳಲ್ಲಿ ಮೌನ ಪ್ರಾರ್ಥನೆ, ಶ್ರದ್ಧಾಂಜಲಿ, ಮೊಂಬತ್ತಿ ಮೆರವಣಿಗೆಗಳು ನಡೆದವು.

ಜನರ ರಾಷ್ಟ್ರಪತಿಯೆಂದೇ ಖ್ಯಾತಿ ಗಳಿಸಿದ್ದ ಕಲಾಂ ಅವರಿಗೆ ಸಂಸತ್‍ನ ಉಭಯ ಸದನಗಳಲ್ಲೂ ಗೌರವ ಸಲ್ಲಿಸಲಾಯಿತು. ಕಲಾಂರನ್ನು ದೇಶದ ಅನರ್ಘ್ಯ ರತ್ನ, ಶ್ರೇಷ್ಠ ಪುತ್ರ ಎಂದು  ಬಣ್ಣಿಸಲಾಯಿತು. ಅವರ ಗೌರವಾರ್ಥ ಸದನಗಳ ಕಲಾಪಗಳನ್ನು 2 ದಿನಗಳವರೆಗೆ ಮುಂದೂಡಲಾಯಿತು.

ಗಣ್ಯರಿಂದ ಶ್ರದ್ಧಾಂಜಲಿ
ಮಧ್ಯಾಹ್ನ 12.15ರ ವೇಳೆಗೆ ಕಲಾಂ ಪಾರ್ಥಿವ ಶರೀರ ಹೊತ್ತಿದ್ದ ವಾಯುಪಡೆಗೆ ಸೇರಿದ ಸಿ- 130 ಜೆ ವಿಮಾನ ವಿಮಾನ ಭೂಸ್ಪರ್ಶ ಮಾಡಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ  ಮೋದಿ, ಉಪರಾಷ್ಟ್ರಪತಿ ಹಮಿದ್ ಅನ್ಸಾರಿ, ದೆಹಲಿ ಪೊಲೀಸ್ ಆಯುಕ್ತ ಬಿ. ಎಸ್.ಬಸ್ಸಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜುಂಗ್, ಭೂಸೇನೆ,  ವಾಯುಸೇನೆ ಹಾಗೂ ನೌಕಾಪಡೆ ಮುಖ್ಯಸ್ಥರು ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. ತ್ರಿವರ್ಣ ಧ್ವಜ ಹೊದಿಸಲಾಗಿದ್ದ ಪಾರ್ಥಿವ ಶರೀರದ ಮುಂದೆ ರಾಷ್ಟ್ರಪತಿ, ಪ್ರಧಾನಿ ಮತ್ತಿತರ ಗಣ್ಯರು ಒಂದು ನಿಮಿಷ ಮೌನ ಆಚರಿಸಿ ಕಂಬನಿ ಮಿಡಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಜನಪ್ರಿಯರಾಗಿದ್ದ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದ ಕಲಾಂ ಪಾರ್ಥಿವ ಶರೀರವನ್ನು  ತೆರೆದ ವಾಹನದಲ್ಲಿ ರಾಜಾಜಿ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸ 10ಕ್ಕೆ ತರಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com