
ಬೆಂಗಳೂರು: ಲೋಕಾಯುಕ್ತ ಕಚೇರಿ ಭ್ರಷ್ಟಾಚಾರ ಹಗರಣದ ಬಗ್ಗೆ ಪ್ರತಿಭಟನೆ, ಒತ್ತಡಗಳಿಗೆ ಮಣಿಯದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‍ರಾವ್ ಅವರು, ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾಗುತ್ತಿದ್ದಂತೆ 15 ದಿನ ರಜೆ ಹಾಕಿದ್ದಾರೆ. ಸೋಮವಾರ ಕಚೇರಿಗೆ ಆಗಮಿಸಿದ್ದ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್, ಮಗನ ಬಂಧನದ ಸುದ್ದಿ ಬರುತ್ತಿದ್ದಂತೆ ಮಧ್ಯಾಹ್ನ ಬೇಗನೆ ಮನೆಗೆ ಮರಳಿದ್ದರು.
ಲೋಕಾಯುಕ್ತ ಸಂಸ್ಥೆಯ ಉಸ್ತುವಾರಿ ರಜಿಸ್ಟ್ರಾರ್ ಟಿ. ಗೋಪಾಲಕೃಷ್ಣ ರೈ ಅವರಿಗೆ ಪತ್ರ ಬರೆದು 15 ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ. ವೈ. ಭಾಸ್ಕರ್ ರಾವ್ ಹಿಂತಿರುಗುವವರೆಗೆ ಸಂಸ್ಥೆಯ ಆಡಳಿತದ ಜವಾಬ್ದಾರಿಯನ್ನು ಉಸ್ತುವಾರಿ ರಿಜಿಸ್ಟ್ರಾರ್ ನೋಡಿಕೊಳ್ಳಲಿದ್ದಾರೆ. ಪ್ರಕರಣದ ಸಂಬಂಧ ರಾಜಿನಾಮೆಗೆ ಒತ್ತಾಯಿಸಿ ಸುಮಾರು 1 ತಿಂಗಳ ನಿರಂತರವಾಗಿ ಪ್ರತಿಭಟನೆ, ಒತ್ತಾಯ ಕೇಳಿಬಂದರೂ ರಾಜಿನಾಮೆ ನೀಡದೆ ರಜೆಯನ್ನು ಹಾಕದೆ ಭಾಸ್ಕರ್ ರಾವ್ ನಿಗದಿತ ವೇಳೆಗೆ ಕಚೇರಿಗೆ ಆಗಮಿಸುತ್ತಿದ್ದರು.
ರಾಜಿನಾಮೆ ವದಂತಿಗೆ ತೆರೆ: ಪುತ್ರನ ಬಂಧನವಾಗುತ್ತಿದ್ದಂತೆ ಭಾಸ್ಕರ್ ರಾವ್ ರಾಜಿನಾಮೆ ನೀಡುತ್ತಾರೆ ಎನ್ನುವ ವದಂತಿ ಹಬ್ಬಿದ್ದವು, ಆದರೆ, ಪುತ್ರನ ಬಂಧನವಾಗುತ್ತಿದ್ದಂತೆ ರಜೆ ಮೇಲೆ ತೆರಳಿರುವ ಲೋಕಾಯುಕ್ತರು ನಗರದ ಅಧಿಕೃತ ನಿವಾಸದಲ್ಲಿ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಹೈದರಾಬಾದ್‍ಗೆ ಹೋಗಿದ್ದಾರೋ ಅಥವಾ ಅಜ್ಞಾತವಾಸದಲ್ಲಿದ್ದರೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಲೋಕಾಯುಕ್ತ ಸಿಬ್ಬಂದಿಗೂ ಯಾವುದೇ ಮಾಹಿತಿ ಇಲ್ಲ. ಉಸ್ತುವಾರಿ ರಿಜಿಸ್ಟ್ರಾರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಭಾಸ್ಕರ್‍ರಾವ್ ಅವರು ಸುದೀರ್ಘ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
ಪುತ್ರನ ಬಂಧನ ಬಳಿಕ ಮುಂದಿನ ನಡೆಯ ಕುರಿತು ಮಾತುಕತೆ ನಡೆಸಲಾಗಿದ್ದು, ರಾಜಿನಾಮೆ ನೀಡಿದ ಬಳಿಕ ತಮ್ಮ ಬಂಧನವಾಗುವ ಸಾಧ್ಯತೆ ಇರಬಹುದೇ ಎಂಬುದರ ಬಗ್ಗೆ
ಚರ್ಚಿಸಿದರು ಎಂದು ಮೂಲಗಳು ಹೇಳಿವೆ. ಲೋಕಾಯುಕ್ತರು ಇತ್ತೀಚೆಗಷ್ಟೆ ಒಂದು ವಾರ ರಜೆ ಮೇಲೆ ತೆರಳಿದ್ದರು. ಆಗ ವೈಯಕ್ತಿಕ ಕಾರಣ ನೀಡಿ ರಜೆ ಹಾಕಿದ್ದ ಲೋಕಾಯುಕ್ತರು, ಈ ಬಾರಿ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಲಾಗಿದೆ.
Advertisement