
ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎ ಪಿ ಜೆ ಅಬ್ದುಲ್ ಕಲಾಮ್ ಅವರ ಸಾವಿನಿಂದ ಇಡೀ ದೇಶ ಶೋಕದಲ್ಲಿರುವಾಗ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗಾಯ್ ಅವರು ಗೋಲಾಘಾಟ್ ನ ಟೀ ತೋಟದ ಕೆಲಸಗಾರರ ಸಮುದಾಯದ ಹೆಣ್ಣು ಮಕ್ಕಳೊಂದಿಗೆ ಅಲ್ಲಿನ ಪ್ರಾದೇಶಿಕ ನೃತ್ಯ ಮಾಡುತ್ತಿದ್ದನ್ನು ಬಿಜೆಪಿ ಪಕ್ಷ ತೀವ್ರವಾಗಿ ಟೀಕಿಸಿದ ಹಿನ್ನಲೆಯಲ್ಲಿ ತಮ್ಮ ಈ ನಡೆಗಾಗಿ ಗೊಗಾಯ್ ಕ್ಷಮೆ ಕೋರಿದ್ದಾರೆ.
"ಶನಿವಾರ ಅವರ (ಗೊಗಾಯ್) ನೆಚ್ಚಿನ ಗೆಳೆಯ ಮಾಜಿ ಕೇಂದ್ರ ಸಚಿವ ಬಿಕೆ ಹಂಡಿಕ್ಯು ಅವರನ್ನು ಕಳೆದುಕೊಂಡಿದ್ದಾರೆ. ಸೋಮವಾರ ಮಾಜಿ ರಾಷ್ಟ್ರಪತಿಯನ್ನು ಕಳೆದುಕೊಂಡಿದ್ದೇವೆ ಆದರೆ ಇಲ್ಲಿ ಮುಖ್ಯಮಂತ್ರಿ ಕುಣಿಯುವುದರಲ್ಲಿ, ಗಾಲ್ಫ್ ಆಡುವುದರಲ್ಲಿ ನಿರತರಾಗಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿದ್ಧಾರ್ಥ ಭಟ್ಟಾಚಾರ್ಯ ಟೀಕಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಮಾಡಿದ ನಂತರ ಮಿಸಾ ಗಾಲ್ಫ್ ಕ್ಲಬ್ ನಲ್ಲಿ ಗಾಲ್ಫ್ ಆಟ ಆಡುತ್ತಾ ಗೊಗಾಯ್ ಕಾಲ ಕಳೆದಿದ್ದರು. ನಂತರ ಇದಕ್ಕೆ ಕ್ಷಮೆ ಕೋರಿದ ಗೊಗಾಯ್ "ನಾನು ಕಾರ್ಯಕ್ರಮದಲ್ಲಿ ಕುಣಿದು ತಪ್ಪು ಮಾಡಿದೆ. ಎಪಿಜೆ ಅಬ್ದುಲ್ ಕಲಾಮ್ ಅವರ ಸಾವಿಗೆ ದೇಶ ಶೋಕದಲ್ಲಿರುವಾಗ ನಾನು ಹೀಗೆ ಮಾಡಬಾರದಿತ್ತು. ಇದಕ್ಕೆ ಕ್ಷಮೆ ಕೋರುತ್ತೇನೆ. ಗಾಲ್ಫ್ ಆಡುವುದು ಮತ್ತು ಆಟ ಮನರಂಜನೆಯಲ್ಲ" ಎಂದು ಅವರು ಹೇಳಿದ್ದಾರೆ.
Advertisement