ಯಾಕೂಬ್ ಗಲ್ಲು: ಕಾನೂನು ತಜ್ಞರ ಅಸಮ್ಮತಿ

ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ಯಾಕುಬ್ ಮೆಮನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಕೆಲವು ಕಾನೂನು ಪಂಡಿತರು ಅಸಮ್ಮತಿ ವ್ಯಕ್ತಪಡಿಸಿದ್ದರೆ...
ಯಾಕೂಬ್ ಮೆಮನ್ ಗೆ ಗಲ್ಲು
ಯಾಕೂಬ್ ಮೆಮನ್ ಗೆ ಗಲ್ಲು

ನವದೆಹಲಿ: ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ಯಾಕುಬ್ ಮೆಮನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಕೆಲವು ಕಾನೂನು  ಪಂಡಿತರು ಅಸಮ್ಮತಿ ವ್ಯಕ್ತಪಡಿಸಿದ್ದರೆ, ಮುಂಬೈ ಸರಣಿ ಸ್ಫೋಟದಲ್ಲಿ ಬಲಿಯಾದವರ ಕುಟುಂಬದವರು ಸ್ವಾಗತಿಸಿದ್ದಾರೆ.

ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಈ  ಪ್ರಕರಣದಲ್ಲಿ  ಸರಿಯಾದ ಪ್ರಕ್ರಿಯೆ ಎನ್ನುವುದನ್ನು ಪರಿಶೀಲಿಸುವಲ್ಲಿ ಸುಪ್ರೀಂ ಕೋರ್ಟ್ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧ ಆಡಳಿತದ ಪಾಲಿಗೆ ಇದೊಂದು ಕಪ್ಪು ದಿನ. ಸಾಕ್ಷಿ  ನೀಡಿದ, ತನಿಖೆಗೆ ಸಹಕಾರ ನೀಡಿದ ಹಾಗೂ ತಮ್ಮ ಕುಟುಂಬವನ್ನು ಪಾಕಿಸ್ತಾನದಿಂದ ಭಾರತಕ್ಕೆ ಕರೆತಂದ ವ್ಯಕ್ತಿಯನ್ನು ಗಲ್ಲಿಗೇರಿಸಲಾಗುತ್ತಿದೆ ಎಂದು ಮತ್ತೊಬ್ಬ ವಕೀಲ ಸತೀಶ್ ಮನೇಶಿಂದೆ  ಅಭಿಪ್ರಾಯಪಟ್ಟಿದ್ದಾರೆ. ಆದರೆ 1993ರ ಸ್ಫೋಟದಲ್ಲಿ ಬಲಿಯಾದವರ ಸಂಬಂಧಿಕರು ಮಾತ್ರ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ನಾವು 22 ವರ್ಷಗಳಿಂದ ಈ ತೀರ್ಪಿಗೆ ಕಾಯುತ್ತಿದ್ದೇವೆ. ಆ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಭೂಗತ ದೊರೆ ದಾವೂದ್ ಮತ್ತು ಟೈಗರ್ ಮೆಮನ್‍ಗೂ ಶಿಕ್ಷೆಯಾಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ತುಷಾರ್ ದೇಶ್ ಮುಖ್ ಹೇಳಿದ್ದಾರೆ.

ರಾಜಕೀಯ ಬೆಂಬಲ ಇಲ್ಲದ್ದಕ್ಕೆ ಗಲ್ಲು
ಸುಪ್ರೀಂ ಕೋರ್ಟ್ ತೀರ್ಪು ಕುರಿತು ಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಹಾಗೂ ಪಂಜಾಬ್ ಸಿಎಂ ಆಗಿದ್ದ ಬಿಯಾಂತ್  ಸಿಂಗ್ ಹತ್ಯೆ ಆರೋಪಿಗಳಿಗೆ ಸಿಕ್ಕಂಥ ರಾಜಕೀಯ ಬೆಂಬಲ ಯಾಕೂಬ್‍ಗೆ ಸಿಗಲೇ ಇಲ್ಲ. ಹಾಗಾಗಿಯೇ ಆತನಿಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜತೆಗೆ, ಬಾಬ್ರಿ ಮಸೀದಿ ಧ್ವಂಸದ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಂಬೈ ಸರಣಿ ಸ್ಫೋಟದಲ್ಲಿ ಯಾಕೂಬ್ ಭಾಗಿಯಾಗಿದ್ದರೂ ಆತನಿಗೆ  ಮರಣದಂಡನೆ ವಿಧಿಸಬೇಕೆಂದಿರಲಿಲ್ಲ. ಈ ಹಿಂದಿನ ಪ್ರಧಾನಿ ನರಸಿಂಹರಾವ್ ನೇತೃತ್ವದ ಸರ್ಕಾರದ ವಂಚನೆಯಿಂದಾಗಿ ಯಾಕೂಬ್ ಗೆ ಮರಣದಂಡನೆಯಾಯ್ತು. ಮಾಜಿ ಪ್ರಧಾನಿ ರಾಜೀವ್  ಗಾಂಧಿ ಹಾಗೂ ಪಂಜಾಬ್ ಸಿಎಂ ಬೇಯಂತ್ ಸಿಂಗ್ ಹತ್ಯೆ ಆರೋಪಿಗಳಿಗೆ ಸಿಕ್ಕಂತೆ ಯಾಕೂಬ್ ಗೆ ರಾಜಕೀಯ ಬೆಂಬಲ ಸಿಗಲೇ ಇಲ್ಲ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಹುಟ್ಟುಹಬ್ಬದ ದಿನವೇ ನೇಣಿಗೆ
ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸ್ಟಾರ್ ಸಂಜಯï ದತ್ ಬುಧವಾರ ಯರವಾಡ ಜೈಲಿನಲ್ಲಿ ತನ್ನ 56ನೇ ಜನ್ಮದಿನ  ಆಚರಿಸಿಕೊಂಡರೆ, ಅದೇ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಯಾಕೂಬ್ ಗುರುವಾರ ತನ್ನ 53ನೇ ಹುಟ್ಟುಹಬ್ಬದ ದಿನವೇ ನೇಣುಗಂಬಕ್ಕೇರಲಿದ್ದಾನೆ. ದತ್ 42 ತಿಂಗಳ ಶಿಕ್ಷೆಗೆ  ಗುರಿಯಾಗಿದ್ದಾರೆ.

ಯಾಕೂಬ್ ಉಯಿಲು ಬರೆದಿಲ್ಲ

ಯಾಕೂಬ್ ಯಾವುದೇ ಉಯಿಲು (ವಿಲ್) ಬರೆದಿಲ್ಲ ಎಂದು ಆತನ ಪರ ವಕೀಲ ಅನಿಲ್ ಗೆದಂ ಹೇಳಿದ್ದಾರೆ. ಜೀವದಾನದ ನಿರೀಕ್ಷೆಯಲ್ಲಿದ್ದ ಮೆಮನ್, ತಾನು ಗಲ್ಲಿನಿಂದ ಪಾರಾಗುತ್ತೇನೆ ಎಂಬ  ವಿಶ್ವಾಸದಲ್ಲಿದ್ದ. ಹಾಗಾಗಿ ಉಯಿಲು ಬರೆದಿಟ್ಟಿಲ್ಲ ಎಂದು ಅನಿಲ್ ಸ್ಪಷ್ಟಪಡಿಸಿದ್ದಾರೆ. ಮೆಮನ್ ದೇಹವನ್ನು ಅಂತಿಮ ಸಂಸ್ಕಾರಕ್ಕೆ ಕುಟುಂಬ ವರ್ಗದವರು ಪಡೆಯಬಹುದು ಎಂದಿರುವ ಅನಿಲ್,  ಆದರೆ, ಅಂತಿಮ ವಾಗಿ ಆತನ ದೇಹವನ್ನು ಜೈಲು ಆವರಣದಲ್ಲೇ ಸಂಸ್ಕಾರ ಮಾಡಬೇಕೇ ಅಥವಾ ಕುಟುಂಬ ವರ್ಗದವರಿಗೆ ನೀಡಬೇಕೆ ಎಂಬುದನ್ನು ಜೈಲು ಅಧಿಕಾರಿಗಳು ಅಥವಾ  ಮಹಾರಾಷ್ಟ್ರ ಸರ್ಕಾರ ನಿರ್ಧರಿಸಲಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com