ಮಿಡ್​ನೈಟ್ ಡ್ರಾಮಾ ಬಳಿಕ ಗಲ್ಲಿಗೇರಿದ ಪಾತಕಿ

1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿರುವ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಂತಿಮ ಕಸರತ್ತು ನಡೆಸಿದ್ದು ಫಲನೀಡಲಿಲ್ಲ....
ಯಾಕೂಬ್ ಮೆಮನ್ ಗೆ ಗಲ್ಲು
ಯಾಕೂಬ್ ಮೆಮನ್ ಗೆ ಗಲ್ಲು

ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿರುವ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಂತಿಮ ಕಸರತ್ತು ನಡೆಸಿದ್ದು ಫಲ ನೀಡಲಿಲ್ಲ. ಪರಿಣಾಮ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಯಾಕೂಬ್ ಗೆ ಗಲ್ಲು ಶಿಕ್ಷೆ ಪ್ರದಾನ ಮಾಡಲಾಗಿದೆ.

ಇದಕ್ಕೂ ಮೊದಲು ಯಾಕೂಬ್‌ ಮೆಮನ್ ಸಲ್ಲಿಸಿದ್ದ 2ನೇ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕೇವಲ 8 ತಾಸು ಉಳಿದಿರುವಾಗ "ಕ್ಲೈಮ್ಯಾಕ್ಸ್‌' ರೀತಿಯಲ್ಲಿ ಬುಧವಾರ ತಡರಾತ್ರಿ 11 ಗಂಟೆಗೆ ತಿರಸ್ಕರಿಸಿದರು. ಕೇಂದ್ರ ಗೃಹ ಸಚಿವಾಲಯದ ಸಲಹೆಯನುಸಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಯಾಕೂಬ್ ಮೆಮನ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. ತಮ್ಮನ್ನು ಭೇಟಿಯಾದ ಗೃಹ ಸಚಿವ ರಾಜನಾಥ ಸಿಂಗ್‌ ಜತೆ ಎರಡೂವರೆ ತಾಸು ಚರ್ಚಿಸಿದ ಪ್ರಣಬ್ ಈ ನಿರ್ಧಾರಕ್ಕೆ ಬಂದರು.

ಇದರ ಬೆನ್ನಲ್ಲೇ ಮೆಮನ್‌ ಗಲ್ಲು ಶಿಕ್ಷೆ ವಿರೋಧಿಸುತ್ತಿದ್ದ ಪ್ರಶಾಂತ್‌ ಭೂಷಣ್‌ ಹಾಗೂ ಇತರ ಕೆಲ ವಕೀಲರು ಭಾರತದ ಮುಖ್ಯ ನ್ಯಾಯಾಧೀಶ ಎಚ್‌.ಎಲ್‌. ದತ್ತು ಅವರ ಮನೆಗೆ ರಾತ್ರಿ 11 ಗಂಟೆಗೆ ಹೋಗಿ, ಗಲ್ಲು ಶಿಕ್ಷೆಗೆ ಪುನಃ ತಡೆ ಕೋರಿ ಕೊನೇ ಯತ್ನ ಮಾಡಿದರು. "ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ನಂತರ ನಿಯಮಾನುಸಾರ ಗಲ್ಲಿಗೆ 14 ದಿನ ಕಾಲಾವಕಾಶ ಇರಬೇಕು. ಹೀಗಾಗಿ ಜುಲೈ 30ರಂದು ಮೆಮನ್‌ನನ್ನು ಗಲ್ಲಿಗೇರಿಸಬಾರದು' ಎಂದು ಮನವಿ ಮಾಡಿದರು.

ಆಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದತ್ತು ಅವರು ಬೆಳಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಪ್ರಫ‌ುಲ್ಲ್ ಪಂತ್‌, ನ್ಯಾಯಮೂರ್ತಿ ಅಮಿತಾವ್ ರಾಯ್‌ ಅವರಿದ್ದ ಪೀಠಕ್ಕೆ ಇದರ ವಿಚಾರಣೆಯ ಹೊಣೆ ವಹಿಸಲಾಯಿತು. ನ್ಯಾಯಮೂರ್ತಿ ದೀಪಕ ಮಿಶ್ರಾ ಅವರ ಮನೆಯಲ್ಲಿ ತಡರಾತ್ರಿ ಸುಮಾರು 2 ಗಂಟೆಯ ವೇಳೆಯಲ್ಲಿ ವಿಚಾರಣೆ ನಡೆದು, ಮೆಮನ್‌ ಅರ್ಜಿಯನ್ನು ತಿರಸ್ಕರಿಸಲಾಯಿತು. ಸುಪ್ರೀಂಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ನಾಗ್ಪುರ ಜೈಲಿನಲ್ಲಿ ಗಲ್ಲುಶಿಕ್ಷೆ ಪ್ರದಾನಕ್ಕೆ ಸಕಲ ಸಿದ್ಧತೆ ನಡೆಯಿತು. ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ನಂತರದ ಕೇವಲ 90 ನಿಮಿಷಗಳ ಅವಧಿಯಲ್ಲಿ ಪಾತಕಿ ಯಾಕೂಬ್ ಮೆಮನ್ ಗೆ ನಾಗ್ಪುರ ಜೈಲಿನಲ್ಲಿ ಗಲ್ಲು ಶಿಕ್ಷೆ ಪ್ರಧಾನ ಮಾಡಲಾಯಿತು.

ಜನ್ಮದಿನದಂದೇ ಗಲ್ಲಿಗೇರಿದ ಯಾಕೂಬ್
1993ರ ಮುಂಬೈ ಸರಣಿ ಸ್ಫೋಟದಲ್ಲಿ ಸುಮಾರು 257 ಮಂದಿಯ ಧಾರುಣ ಸಾವಿಗೆ ಕಾರಣವಾದ ಭೂಗತ ಪಾತಕಿ ಯಾಕೂಬ್ ಮೆಮನ್ ತನ್ನ ಜನ್ಮದಿನದಂದೇ ಗಲ್ಲಿಗೇರಿದ್ದಾನೆ. ಈ ಹಿಂದೆ ಟಾಡಾ ನ್ಯಾಯಾಲಯ ನೀಡಿದ್ದ ತೀರ್ಪನಿ ವಿರುದ್ಧ ಯಾಕೂಬ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ಸುಪ್ರೀಂ ಕೋರ್ಟ್ ಕೂಡ ಟಾಡಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಹೀಗಾಗಿ ಸುಮಾರು 21 ವರ್ಷಗಳ ಕಾಲದ ಸುದೀರ್ಘ ವಿಚಾರಣೆ ಬಳಿಕ ಯೂಕೂಬ್  ಜುಲೈ 30ರಂದು ಆತನ ಜನ್ಮ ದಿನದಂದೇ ಗಲ್ಲಿಗೇರಿಸಲಾಗಿದೆ. ಜುಲೈ 30 ಆತನ ಜನ್ಮದಿನವಾಗಿದ್ದು ಅಂದೇ ಗಲ್ಲು ಶಿಕ್ಷೆಗೆ ಒಳಪಡಿಸಿರುವು ಆತನ ಕುಟುಂಬ ವರ್ಗದವರಿಗೆ ತೀವ್ರ ನೋವು ಉಂಟು ಮಾಡಿದೆ.

ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ಫಲ ನೀಡದ ಕಾರಣ ಗುರುವಾರ ಆತನನ್ನು ಗಲ್ಲಿಗೇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com