
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಲಂಚ ಆರೋಪ ಸಂಬಂಧ ನ್ಯಾ.ಭಾಸ್ಕರ್‍ರಾವ್ ಪುತ್ರ ಅಶ್ವಿನ್ ರಾವ್ ಅವರ ಆಪ್ತ ಎಂದು ಹೇಳಿಕೊಂಡಿರುವ ವ್ಯಕ್ತಿ ವಿ.ಭಾಸ್ಕರ ಬಂಧನ ಇನ್ನೂ ಆಗಿಲ್ಲ.
ಲೋಕಾಯುಕ್ತರೊಂದಿಗಿನ ತನ್ನ ನಂಟಿನ ಬಗ್ಗೆ ಸುವರ್ಣ ನ್ಯೂಸ್ ಮುಂದೆ ಆರೋಪಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದ. ಅಲ್ಲದೇ ವಕೀಲರೊಂದಿಗಿನ ಚರ್ಚೆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ. ಈ ಹಿನ್ನೆಲೆಯಲ್ಲಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತ ಕಚೇರಿ ಲಂಚ ಹಗರಣದಲ್ಲಿ ಆರೋಪಿ ಭಾಗಿಯಾಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದು ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ.
ಎರಡು ಪ್ರಕರಣ ಗಳಲ್ಲಿ ಬೇಕಾಗಿರುವ ವಿ. ಭಾಸ್ಕರ್‍ನಿಗಾಗಿ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. `ಹಳೇ ಕಾರುಗಳ ಡೀಲರ್ ಆಗಿರುವ ಅಶ್ವಿನ್‍ರಾವ್ ಹಾಗೂ ನನ್ನ ನಡುವೆ ತುಂಬಾ ಆತ್ಮೀಯ ಸಂಬಂಧ ಇತ್ತು. ಅವರಿಗೆ ಪಾಸ್ ಪೋರ್ಟ್ ಮಾಡಿಸಿಕೊಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಅವರು ಕೂಡಾ ಯಾವುದಾದರೂ ಕಾರಿನ ವ್ಯವಹಾರ ಇದ್ದರೆ ನನಗೆ ಹೇಳುತ್ತಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ಜವಾನನಿಂದ ದಿವಾನನವರೆಗೆ ಭ್ರಷ್ಟರಿದ್ದಾರೆ. ಹಣ ನೀಡಿದರೆ, ಯಾರ ಕಚೇರಿ ಮೇಲೆ ಬೇಕಾದರೂ ದಾಳಿ ಮಾಡುತ್ತಾರೆ. ಲೋಕಾಯುಕ್ತದಲ್ಲಿರುವ ಎಸ್ಪಿ, ಡಿವೈಎಸ್ಪಿಗಳು, ಸರ್ಕಾರಿ ಅಧಿಕಾರಿಗಳು ಇರುವ ಜಾಗಕ್ಕೆ ತೆರಳಿ ಬಂಧಿ ಸುತ್ತಾರೆ. ಅಥವಾ ಬೇಕೆಂದ ಭ್ರಷ್ಟ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಾರೆ' ಎಂದು ಭಾಸ್ಕರ ಹೇಳಿಕೊಂಡಿದ್ದ.
`ಲೋಕಾಯುಕ್ತರ ಪುತ್ರ ಅಶ್ವಿನ್‍ರಾವ್ ಬಳಿ ಎಲ್ಲಾ ಸಚಿವರ ಆಪ್ತ ಕಾರ್ಯದರ್ಶಿಗಳು ಬಂದು ಹೋಗು ತ್ತಿದ್ದರು. ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಉನ್ನತ ದರ್ಜೆ ಅಧಿಕಾರಿಗಳು ಲೋಕಾಯುಕ್ತಕ್ಕೆ ಹಣ ಸಂದಾಯ ಮಾಡುತ್ತಿದ್ದರು. ಐಎಎಸ್ ದರ್ಜೆ ಅಧಿಕಾರಿಗಳು ದ್ವಿಚಕ್ರ ವಾಹನದಲ್ಲಿ ಲೋಕಾಯುಕ್ತ ಕಚೇರಿಗೆ ಬಂದು ಮುಖಮುಚ್ಚಿಕೊಂಡು ಹಣ ನೀಡಿ ಹೋಗುತ್ತಿದ್ದರು. ಅತಿ ಭ್ರಷ್ಟ ಅಧಿಕಾರಿಗಳೇ ಲೋಕಾಯುಕ್ತ ಕಚೇರಿಗೆ ಬರುತ್ತಿದ್ದರು. ಅರಣ್ಯ ಇಲಾಖೆ, ಜಿಲ್ಲಾಧಿಕಾರಿ, ಮರಳು ಮಾಪಿsಯಾದವರು ಕೂಡಾ ಲೋಕಾಯುಕ್ತಕ್ಕೆ ಹಣ ಪಾವತಿಸುತ್ತಿದ್ದರು' ಎಂದು ಸಂದರ್ಶನದಲ್ಲಿ ಆರೋಪಿ ಭಾಸ್ಕರ್ ಹೇಳಿದ್ದಾನೆ.
ಎಸ್ಐಟಿಯಿಂದ ತನಿಖೆ ಚುರುಕು
ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಹಗರಣ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಡೀಲ್ ಕುದುರಿಸಿದ್ದಾರೆ ಎನ್ನಲಾದ ಹೋಟೆಲ್ ಗಳು ಹಾಗೂ ಇತರೆ ಸ್ಥಳಗಳಿಗೆ ಆರೋಪಿಗಳನ್ನು ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ನೀಡಿದ ಹೇಳಿಕೆ ಆಧಾರದ ಮೇಲೆ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಮಾಡಿದ್ದಾರೆ.
ಗುರುವಾರ ಸಿಐಡಿ ಕಚೇರಿಯಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೋಟೆಲ್‍ಗೆ ಆರೋಪಿಗಳಾದ ಶ್ರೀನಿವಾಸಗೌಡ, ಶಂಕರೇಗೌಡ ಅವರನ್ನು ಕರೆತಂದ ಅಧಿಕಾರಿಗಳು ಡೀಲ್ ನಡೆದಿದೆ ಎನ್ನಲಾದ ಕೊಠಡಿ ಹಾಗೂ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಪತ್ರಕರ್ತ ಶ್ರೀನಿವಾಸಗೌಡ ಅವರು ತಮಗೆ ಅನುಕೂಲ ಎನಿಸುವ ಸ್ಥಳಗಳಿಗೆ ಅಧಿಕಾರಿಗಳನ್ನು ಕರೆಸಿಕೊಂಡು ಬೆದರಿಸಿ ಡೀಲ್ ಕುದುರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿಗಳಾಗಿರುವ ನ್ಯಾ.ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್ ಹಾಗೂ ಪಿಆರ್‍ಒ ಸೈಯ್ಯದ್ ರಿಯಾಜ್ ಅವರ ಮನೆ ಶೋಧ ಕಾರ್ಯ ನಡೆಸಲು ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದಾರೆ. ಗುರುವಾರ ಸೈಯ್ಯದ್ ರಿಯಾಜ್ ಅವರನ್ನು ಕೋರಮಂಗಲದಲ್ಲಿರುವ ಅವರ ಮನೆಗೆ ಕರೆದೊಯ್ದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಕೆಲ ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಹೈದ್ರಾಬಾದ್‍ಗೆ ತಂಡ
ಎಂಜಿನಿಯರ್ ಚನ್ನಬಸಪ್ಪ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಶ್ವಿನ್ ವಶಕ್ಕೆ ಪಡೆದಿರುವ ಎಸ್‍ಐಟಿ ಅಧಿಕಾರಿಗಳು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಹೈದ್ರಾಬಾದ್‍ಗೆ ಕರೆದೊಯ್ಯುವ ಸಾಧ್ಯತೆ ಇದೆ. ಡೀಲ್‍ಗಾಗಿ ತನ್ನನ್ನು ಹೈದ್ರಾಬಾದ್‍ಗೆ ಕರೆಸಿಕೊಂಡಿದ್ದರು ಎಂದು ದೂರುದಾರ ಚನ್ನಬಸಪ್ಪ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವಿನ್‍ರಾವ್ ಅವರನ್ನು ಡೀಲ್ ನಡೆದಿರುವ ಸ್ಥಳಕ್ಕೆ ಕರೆದೊಯ್ದು ಮನೆಯಲ್ಲೂ ಶೋಧ ಕಾರ್ಯ ನಡೆಸಲಿದ್ದಾರೆ. ಆರೋಪಿಗಳು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕ, ಲೋಕಾಯುಕ್ತ ಕಚೇರಿ ಹಾಗೂ ಅಶ್ವಿನ್ ರಾವ್ ಅವರೊಂದಿಗೆ ಸಂಪರ್ಕದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಅಶೋಕ್ ಕುಮಾರ್ ಕಸ್ಟಡಿ ಅಂತ್ಯ
ಲಂಚ ಪ್ರಕರಣದಲ್ಲಿ ಮೊದಲು ಬಂಧಿತನಾಗಿರುವ ಆರೋಪಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಅಶೋಕ್‍ಕುಮಾರ್ ಎಸ್‍ಐಟಿ ಕಸ್ಟಡಿ ಅವಧಿ ಜು.31 ಅಂತ್ಯಗೊಳ್ಳಲಿದೆ. ಹೀಗಾಗಿ, ಆರೋಪಿಯನ್ನು ಲೋಕಾಯುಕ್ತ ನ್ಯಾಯಾಲಯದ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. 10 ದಿನಗಳ ವಿಚಾರಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇಲ್ಲ. ಅಗತ್ಯ ವಿಚಾರಣೆ ಪೂರ್ಣಗೊಂಡಿರುವ ಕಾರಣ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಎಂದು ಮನವಿ ಮಾಡಲಿದ್ದಾರೆ. ಬುಧವಾರ ನಗರದ ವಿವಿಧ ಹೋಟೆಲ್ ಗಳಿಗೆ ಕರೆದೊಯ್ದ ಎಸ್‍ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿ ಮೊಬೈಲ್ ಫೋನ್ ಮೂಲಕ ಹಾಗೂ ನೇರವಾಗಿ ವಿವಿಧ ಅಧಿಕಾರಿಗಳೊಂದಿಗೆ ಹೊಂದಿರುವ ನಂಟಿನ ಬಗ್ಗೆಯೂ ವಿಚಾರಣೆ ವೇಳೆ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ.
Advertisement