ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ಸಮ್ಮತಿ

ಪತಿ-ಪತ್ನಿ ಪ್ರಕರಣ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಅಂತರ್ ಘಟಕ ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲೂ ಅಂಗೀಕಾರ ದೊರೆತಿದೆ...
ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ)
ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ)

ವಿಧಾನಸಭೆ/ವಿಧಾನಪರಿಷತ್: ಪತಿ-ಪತ್ನಿ ಪ್ರಕರಣ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಅಂತರ್ ಘಟಕ ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲೂ ಅಂಗೀಕಾರ ದೊರೆತಿದೆ.

ಈ ಹಿಂದೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕೃತಗೊಂಡಿದ್ದ ಈ ವಿಧೇಯಕದಲ್ಲಿ ಅನುದಾನಿತ ಶಾಲೆಗಳು ಮತ್ತು 2005ಕ್ಕೆ ಸೇವೆಗೆ ನೇಮಕಗೊಂಡು ಐದು ವರ್ಷ ಪೂರ್ಣಗೊಂಡ ಎಂಬ ಎರಡು ಅಂಶಗಳು ಸೇರ್ಪಡೆಯಾಗದೇ ಇದ್ದ ಹಿನ್ನೆಲೆಯಲ್ಲಿ ಎರಡನೇ ತಿದ್ದುಪಡಿ ತರಲಾಗಿದೆ. ವಿಧೇಯಕ ಮಂಡಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಈ ವಿಧೇಯಕದಲ್ಲಿ ಯಾವುದೇ ಹೊಸ ವಿಚಾರಗಳು ಸೇರ್ಪಡೆ ಯಾಗಿಲ್ಲ. ವಿಧೇಯಕದಲ್ಲಿ ಎರಡು ಅಂಶಗಳನ್ನು ಮಾತ್ರ ಸೇರಿಸಿದ್ದೇವೆ. ಆದರೆ, ಕೌನ್ಸೆಲಿಂಗ್ ವಿಳಂಬವಾಗುವುದಕ್ಕೆ ಸರ್ಕಾರ ಕಾರಣವಲ್ಲ. ವಿಧೇಯಕಕ್ಕೆ ರಾಜಭವನ ದಿಂದ ಒಪ್ಪಿಗೆ ದೊರೆಯುವುದಕ್ಕೆ ತಡವಾಯಿತು ಎಂದು ಹೇಳಿದರು.

ಸರ್ಕಾರ ಈ ನಿಯಮವನ್ನು ಜಾರಿಗೆ ತಂದ ನಂತರ 82 ಸಾವಿರ ಶಿಕ್ಷಕರ ವರ್ಗಾವಣೆಗಾಗಿ ಅರ್ಜಿ ಹಾಕಿದ್ದರು. ಆದರೆ, 13 ಸಾವಿರ ಜನಕ್ಕೆ ಮಾತ್ರ ವರ್ಗಾವಣೆ ಸೌಲಭ್ಯ ದೊರೆತಿದೆ. ಈ
ತಿದ್ದುಪಡಿ ವಿಧೇಯಕ ಜಾರಿಗೆ ಬಂದ ನಂತರ ಇನ್ನೂ 9 ಸಾವಿರ ಜನಕ್ಕೆ ಹೆಚ್ಚುವರಿ ಸೌಲಭ್ಯ ಸಿಗುತ್ತದೆ ಎಂದು ವಿವರಿಸಿದರು. ಚರ್ಚೆಯಲ್ಲಿ ಭಾಗವಹಿಸಿದ ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ
ಹೆಗಡೆ ಕಾಗೇರಿ, ಶೈಕ್ಷಣಿಕವಾಗಿ ಹಿಂದುಳಿದಿರುವ ರಾಜ್ಯದ 11 ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವುದೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವುದಕ್ಕೆ ಕೌನ್ಸೆಲಿಂಗ್ ಪದ್ಧತಿಯಿಂದ ಸಾಧ್ಯವಾಗಿದೆ. ಆದರೆ ಅಲ್ಲಲ್ಲಿ ಸಮಸ್ಯೆ ಇನ್ನೂ ಇದೆ ಎಂಬ ಕಾರಣಕ್ಕೆ ಈ ಪದ್ಧತಿಯನ್ನು ಕೈ ಬಿಡಬೇಕಿಲ್ಲ. ಇದರ ಜತೆಗೆ ತಿದ್ದುಪಡಿ ವಿಧೇಯಕದಲ್ಲಿ ಶಿಕ್ಷಕಿಯು ವಿಧವೆಯಾಗಿದ್ದಲ್ಲಿ ಎಂಬುದರ ಜತೆಗೆ ಶಿಕ್ಷಕ ವಿಧುರನಾಗಿದ್ದಲ್ಲಿ ಎಂಬುದನ್ನೂ ಸೇರಿಸಬೇಕು ಎಂದರು

ಶಿಕ್ಷಣ ಇಲಾಖೆಯಲ್ಲಿ 2007ರಿಂದಲೂ ಶಿಕ್ಷಕರ ನೇಮಕ ಆಗಿಲ್ಲ. ಇದರಿಂದಾಗಿ ಇಲಾಖೆಯಲ್ಲಿ ಸುಮಾರು 29ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿದರೆ ಶಿಕ್ಷಕರ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು. ನಾನು ಸಚಿವನಾಗಿದ್ದಾಗ 48,318 ಶಿಕ್ಷರ ಹುದ್ದೆಗಳು ಖಾಲಿ ಇದ್ದವು. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಪಡೆದು ಕೆಲವು ಶಿಕ್ಷಕರ ನೇಮಕ ಮಾಡಲಾಗಿತ್ತು. ಆದರೂ ಇನ್ನೂ 29 ಸಾವಿರ ಹುದ್ದೆಗಳು ಬಾಕಿ ಇವೆ. ಈ ಹುದ್ದೆಗಳಿಗೆ ನೇಮಕವಾದರೆ ಹೊಸದಾಗಿ ನೇಮಕಗೊಂಡ ಶಿಕ್ಷಕರು ನಿಯಮದಂತೆ ಸಿ ವಲಯದ (ಗ್ರಾಮೀಣ ಸೇವೆ) ಸೇವೆಗೆ ಹೋಗುತ್ತಾರೆ. ಆಗ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ತುಂಬಿದಂತಾಗುತ್ತದೆ ಎಂದು ಹೊರಟ್ಟಿ ಸಲಹೆ ನೀಡಿದರು.

ಶಿಕ್ಷರ ವರ್ಗಾವಣೆ ಎರಡನೇ ತಿದ್ದುಪಡಿ ವಿಧೇಯಕ ಶುಕ್ರವಾರ ವಿಧಾನಪರಿಷತ್ತಿನಲ್ಲೂ ಅಂಗೀಕಾರವಾಯಿತು. ಬಿಜೆಪಿಯ ಎಸ್.ವಿ. ಸಂಕನೂರು ಮಾತನಾಡಿ, ಈ ವಿಧೇಯಕದ ಪ್ರಕಾರ ಶಿಕ್ಷಕರ ಪರಸ್ಪರ ವರ್ಗಾವಣೆಯನ್ನು ಸೇವಾ ಅವ„ಯಲ್ಲಿ ಒಮ್ಮೆ ಮಾತ್ರ ಮಾಡಿಕೊಳ್ಳಬಹುದಾಗಿದೆ. ಆದರೆ, ಇದರಿಂದ ಇಲಾಖೆಗೆ ಯಾವುದೇ ತೊಂದರೆ ಇಲ್ಲದ ಕಾರಣ ಈ ಯಮ ತೆಗೆಯಬೇಕು ಎಂದರು. ಅರುಣ್ ಶಹಾಪುರ ಅವರು ಈ ವಿಧೇಯಕದಿಂದ ಟಿಜಿಟಿ ಶಿಕ್ಷಕರ ಸಮಸ್ಯೆ ಪರಿಹಾರ ಪರಿಹಾರ ಆಗುವುದಿಲ್ಲ. ಆದ್ದರಿಂದ ಇದಕ್ಕೆ ಇನ್ನಷ್ಟು ತಿದ್ದುಪಡಿಗಳು ಅಗತ್ಯವಿದೆ ಎಂದರೆ, ಕಾಂಗ್ರೆಸ್‍ನ ಉಗ್ರಪ್ಪ ಅವರು ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸುವುದರಿಂದ ಅಧಿಕಾರಿಗಳು ಅಕ್ರಮ ನಡೆಸಲು ದಾರಿಯಾಗುತ್ತದೆ. ಆದ್ದರಿಂದ ಕೌನ್ಸೆಲಿಂಗ್ ರದ್ದು ಮಾಡಬೇಕೆಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸೋಮಣ್ಣ, ಕೌನ್ಸೆಲಿಂಗ್ ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ರದ್ದುಗೊಳಿಸಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com