
ನವದೆಹಲಿ: ಈಗಾಗಲೇ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಕ್ಕೆ ಆಘಾತಕಾರಿ ಸುದ್ದಿ. ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಬರಗಾಲ ಎದುರಾಗುವ ಸಾಧ್ಯತೆಯಿದೆ.
ಹೀಗೆಂದು ಕೇಂದ್ರ ಭೂವಿಜ್ಞಾನ ಸಚಿವ ಹರ್ಷವರ್ಧನ್ ಅವರೇ ಮಾಹಿತಿ ನೀಡಿದ್ದಾರೆ. ಮಂಗಳವಾರ ಹವಾಮಾನ ಇಲಾಖೆಯು ಈ ವರ್ಷದ ಮಳೆಯ ಮುನ್ಸೂಚನೆಯನ್ನು ಪರಿಷ್ಕೃರಿಸಿದ್ದು, ಈ ಬಾರಿ ದೀರ್ಘಾವಧಿ ಸರಾಸರಿ (ಎಲ್ ಪಿಎ)ಯ ಶೇ.93ರ ಬದಲಾಗಿ ಶೇ.88 ಮಳೆ ಬೀಳಲಿದೆ ಎಂದು ಹೇಳಿದೆ. ಜತೆಗೆ, ಮಳೆ ಕೊರತೆ ಪರಿಣಾಮ ಬರಗಾಲ ಎದುರಾಗುವ ಸಾಧ್ಯತೆಯೂ ಇದ್ದು, ದೇಶದ ವಾಯವ್ಯ ಭಾಗ ತೀವ್ರ ಸಮಸ್ಯೆ ಎದುರಿಸಲಿದೆ ಎಂದೂ ಹೇಳಿದೆ.
ಶೇ.4 ಇಳಿಕೆ
ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಮುಂಗಾರು ಮಳೆಯ ಬಗ್ಗೆ ಮುನ್ಸೂಚನೆ ಪ್ರಕಟಿಸಿತ್ತು. ಅದರಂತೆ, ಈ ಬಾರಿ ದೀರ್ಘಾವಧಿ ಸರಾಸರಿಯ ಶೇ.93ರಷ್ಟು ಅಂದರೆ `ವಾಡಿಕೆಗಿಂತ ಕಡಿಮೆ' ಮಳೆಯಾಗಲಿದೆ ಎಂದು ಹೇಳಿತ್ತು. ಆದರೆ ಈಗ ಪರಿಷ್ಕೃತ ಮುನ್ಸೂಚನೆಯಲ್ಲಿ ಈ ಪ್ರಮಾಣವನ್ನು ಶೇ.88ಕ್ಕೆ ಇಳಿಸಲಾಗಿದ್ದು, ದೇಶ ಮಳೆಯ ತೀವ್ರ ಕೊರತೆ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಲಾಗಿದೆ.
ದೇಶಕ್ಕೆ ಬರಗಾಲ ಎದುರಾಗಲಿದೆಯೇ?
ಎಲ್-ನಿನೋ ಪರಿಣಾಮದಿಂದಾಗಿ ಮಳೆ ಕೊರತೆ ಉಂಟಾಗಲಿದೆ ಎಂದು ಹೇಳಲಾಗಿದ್ದು, ಇದರಿಂದ ದೇಶಕ್ಕೆ ಬರಗಾಲ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ದೇಶದ ಜನಸಂಖ್ಯೆಯ ಶೇ.60ರಷ್ಟು ಮಂದಿ ಕೃಷಿ ಕಾರ್ಮಿಕರಾಗಿದ್ದು, ಇವರೆಲ್ಲರೂ ಮಳೆಯನ್ನೇ ಅವಲಂಬಿಸಿದ್ದಾರೆ. ಕಳೆದ ವರ್ಷ ದೇಶದಲ್ಲಿ ಶೇ.12ರಷ್ಟು ಕಡಿಮೆ ಮಳೆ ಬಿದ್ದಿದ್ದು, ದವಸಧಾನ್ಯ, ಹತ್ತಿ, ಎಣ್ಣೆಬೀಜಗಳ ಉತ್ಪಾದನೆಗೆ ಡ್ಡಿಯಾಗಿತ್ತು. ಜತೆಗೆ, 2014-15ರಲ್ಲಿ ಕೃಷಿ ಪ್ರಗತಿಯು ಶೇ.0.2ರಷ್ಟಾಗಿತ್ತು.
Advertisement