ನಂಜನಗೂಡಲ್ಲಿ ಫುಲ್ ಬಿಗಿ

ಸ್ಥಳೀಯ ನೆಸ್ಲೆ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮುಂದೇನು ಎಂಬ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.
ಮ್ಯಾಗಿ
ಮ್ಯಾಗಿ

ನಂಜನಗೂಡು: ಸ್ಥಳೀಯ ನೆಸ್ಲೆ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮುಂದೇನು ಎಂಬ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.

ಗುರುವಾರದಿಂದಲೇ ಇಲ್ಲಿನ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು ಕಾರ್ಮಿಕರನ್ನು ರಜೆ ಮೇಲೆ ಕಳುಹಿಸಿದೆ. ಒಂದೆಡೆ ಬೇಡಿಕೆಯೂ ಇಲ್ಲ ಹಾಗೂ ನಿಷೇಧದ ತೂಗುಕತ್ತಿಯಿಂದ ಹೆದರಿರುವ ಕಂಪೆನಿಯು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇಲ್ಲಿ ಒಟ್ಟು 700 ಮಂದಿ ಕೆಲಸ ಮಾಡುತ್ತಿದ್ದು, ಇವರಲ್ಲಿ 300 ಕಾಯಂ ನೌಕರರಿದ್ದಾರೆ. ಉಳಿದ 400 ಮಂದಿ ಗುತ್ತಿಗೆ ಆಧಾರದ ನೌಕರರಾಗಿದ್ದು,  ಭವಿಷ್ಯದ ಬಗ್ಗೆ ಭಯಪೀಡಿತರಾಗಿದ್ದಾರೆ.

ವಿಚಿತ್ರವೆಂದರೆ ನಂಜನಗೂಡಿನಲ್ಲಿರುವ ನೆಸ್ಲೆ ಕಾರ್ಖಾನೆಯ ನೌಕರರು ತಮಿಳುನಾಡು ಮತ್ತು ಕೇರಳಕ್ಕೆ ಸೇರಿದವರಾಗಿದ್ದು, ಕನ್ನಡಿಗರೇ ಕಡಿಮೆ. ಹೀಗಾಗಿ ಕಾರ್ಖಾನೆಯೊಳಗೆ ಏನಾಗುತ್ತಿದೆ ಎಂದು ತಿಳಿಯಲು ಸ್ಥಳಿಯರಿಗೆ ಸಾಧ್ಯವೇ ಆಗಿಲ್ಲ. ಈ ಬಗ್ಗೆ ಪತ್ರಿಕೆ ಕಾರ್ಖಾನೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿತಾದರೂ,ಯಾರೂ ಬಾಯಿಬಿಡಲು ತಯಾರಿಲ್ಲ. ಅಲ್ಲದೆ ಕೆಲವರಂತೂ ನಮಗೆ ಕರೆ ಮಾಡಲೇಬೇಡಿ. ನಮ್ಮ ಫೋನ್ಗಳು ಟ್ಯಾಪ್ ಆಗುತ್ತಿರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಶನಿವಾರ ಬೆಳಗ್ಗೆ 9 ಗಂಟೆಗೆ ನೌಕರರ ತುರ್ತು ಸಭೆ ಕರೆಯಲಾಗಿದ್ದು, ಈ ಬಳಿಕ ಮುಂದಿನ ನಿರ್ಧಾರ ಹೊರಬೀಳಲಿದೆ. ಇದಷ್ಟೇ ಅಲ್ಲ, ಕಾರ್ಖಾನೆ ಬಳಿ ಹೊರಗಿನವರು ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ನೌಕರರನ್ನು ಬಸ್‍ನಲ್ಲಿ ಕರೆತಂದು, ವಾಪಸ್ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಹೀಗಾಗಿ ಸ್ಥಳಿಯರಿಗೂ ನೌಕರರಿಗೂ ಸಂಪರ್ಕ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಕಾರ್ಖಾನೆಯಲ್ಲಿ ಯಾವ ರೀತಿಯ ಮ್ಯಾಗಿ ತಯಾರಾಗುತ್ತಿದೆ ಎಂದು ಅರಿಯುವುದು ಕಷ್ಟ. ಪ್ರತಿನಿತ್ಯ ಈ ಘಟಕದಲ್ಲಿ 75 ಟನ್ ಗೂ ಹೆಚ್ಚು ಮ್ಯಾಗಿ ನೂಡಲ್ಸ್ ಉತ್ಪಾದನೆಯಾಗುತಿತ್ತು.

ಉತ್ಪಾದನೆ ಸ್ಥಗಿತ: ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಮ್ಯಾಗಿ ತಯಾರಿಕಾ ಘಟಕ ಗುರುವಾರ ರಾತ್ರಿಯಿಂದ ಉತ್ಪಾದನೆ ಸ್ಥಗಿತಗೊಳಿಸಿದೆ. ಬಹುತೇಕ ರಾಜ್ಯ ಸರ್ಕಾರಗಳು ಮ್ಯಾಗಿ ಪರೀಕ್ಷೆ ನಡೆಸುತ್ತಿರುವುದು ಹಾಗೂ ಮ್ಯಾಗಿಯ 9 ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಕೇಂದ್ರ ಸೂಚನೆ ನೀಡುತ್ತಿದ್ದಂತೆ ಉತ್ಪಾದನೆ ನಿಲ್ಲಿಸಲಾಗಿದೆ.

ಇನ್ನೊಂದು ಘಟಕಕ್ಕೆ ನಡೆದಿತ್ತು ಸಿದ್ಧತೆ: 2011ರಲ್ಲಿ ಈ ಉತ್ಪಾದನೆ ಘಟಕಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದರು. ರು. 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಮ್ಯಾಗಿ ತಯಾರಿಕಾ ಘಟಕ ಇಂದಿನವರೆಗೂ ಲಾಭದಾಯಕವಾಗಿ ನಡೆದು ಬಂದಿರುವುದಲ್ಲದೇ ರು. 600 ಕೋಟಿ ವೆಚ್ಚದ ಮತ್ತೊಂದು ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು. ಈ ನೂತನ ಘಟಕಕ್ಕೆ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರ ಅವಶ್ಯಕತೆಯೂ ಇತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com