ಕೈದಿಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್

ನ್ಯಾಯಾಲಯಕ್ಕೆ ವಿಚಾರಣಾಧೀನ ಕೈದಿಗಳನ್ನು ಕರೆದೊಯ್ಯಲು ಪೊಲೀಸ್ ಇಲಾಖೆ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ನೀಡಲು ಕೋರ್ಟ್ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ತಂತ್ರಜ್ಞಾನ ಅಳವಡಿಸಲು ಸರ್ಕಾರ ನಿರ್ಧರಿಸಿದೆ...
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ

ಬೆಂಗಳೂರು:ನ್ಯಾಯಾಲಯಕ್ಕೆ ವಿಚಾರಣಾಧೀನ ಕೈದಿಗಳನ್ನು ಕರೆದೊಯ್ಯಲು ಪೊಲೀಸ್ ಇಲಾಖೆ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ನೀಡಲು ಕೋರ್ಟ್ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ತಂತ್ರಜ್ಞಾನ ಅಳವಡಿಸಲು ಸರ್ಕಾರ ನಿರ್ಧರಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿರುವ 62 ಕಾರಾಗೃಹಗಳಿಂದ ಕೋರ್ಟ್ ಗೆ ವಿಡಿಯೋ ಸಂವಾದ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತಂತೆ 30 ಕೋಟಿ ರೂಪಾಯಿ ಪ್ರಸ್ತಾವನೆ ಸಿದ್ದವಾಗಿದ್ದು, ಸಂಪುಟದ ಅನುಮೋದನೆ ಪಡೆದು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಜಯಚಂದ್ರ, ಜಾರ್ಖಂಡ್ ಮತ್ತು ಛತ್ತೀಸ್ ಗಢದಲ್ಲಿ ಪ್ರಮುಖ ಪ್ರಕರಣಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಯೋಜನೆ ರೂಪಿಸಲಾಗಿದೆ ಎಂದರು.

ಕೈದಿಗಳ ವಿಡಿಯೋ ವಿಚಾರಣೆಗೆ ಗುಣಮಟ್ಟದ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುವುದು. ಅಲ್ಲದೆ ಈ ವಿಡಿಯೋ ಸಂವಾದದ ಕಾರ್ಯಕ್ರಮದಲ್ಲಿ ಸಂಬಂಧಪಟ್ಟವರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುವುದು. ಅತ್ಯುನ್ನತ ಮಟ್ಟದ ಕ್ಯಾಮರಾ, ವೈ ಫೈ ಬಳಸಲಾಗುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆತರುವುದೇ ದೊಡ್ಡ ಸವಾಲಿನ ಕೆಲಸ. ಟ್ರಾಫಿಕ್ ಜಾಮ್ ನಿಂದಾಗಿ ಅನೇಕ ಬಾರಿ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆ ತರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ವಿಡಿಯೋ ಸಂವಾದದ ಮೂಲಕ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯವಿದೆ  ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com