
ಮೈಸೂರು: 5 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರು ವಿದ್ಯಾಭ್ಯಾಸದ ಹೊಣೆಹೊತ್ತಿದ್ದ ಬಾಲಕ ಶಾಲಾ ಶುಲ್ಕವನ್ನು ಕಟ್ಟಿಲ್ಲ ಎಂಬ ಕಾರಣದಿಂದ ಶಾಲಾ ಆಡಳಿತ ಮಂಡಳಿ ಹೊರಗೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ದೊಡ್ಡವರ ಸಣ್ಣತನ ಎಂಬ ಮಾತು ಈ ಪ್ರಕರಣಕ್ಕೆ ಸರಿಯಾಗಿ ಹೋಲಿಕೆಯಾಗುತ್ತದೆ ಎಂದೆನಿಸುತ್ತದೆ. ಏಕೆಂದರೆ ಮಾಜಿ ಮುಖ್ಯಮಂತ್ರಿ, ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಐದು ವರ್ಷಗಳ ಹಿಂದೆ ದತ್ತು ಪಡೆದು ವಿದ್ಯಾಭ್ಯಾಸದ ಹೊಣೆಹೊತ್ತಿದ್ದ ಬಾಲಕ ವಿಶ್ವನಾಥ ಇದೀಗ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಶಾಲೆ ಆರಂಭವಾಗಿ 15 ದಿನಗಳೇ ಕಳೆದರೂ ವಿಶ್ವನಾಥ ಮಾತ್ರ ಇನ್ನೂ ಶಾಲೆಗೆ ಹೋಗಿಲ್ಲ. ಕಾರಣ ಆತ ಇನ್ನೂ ಶಾಲಾ ಶುಲ್ಕವನ್ನೇ ಕಟ್ಟಿಲ್ಲ. ಹೀಗಾಗಿ ಶಾಲೆಯ ಆಡಳಿತ ಮಂಡಳಿ ಆತನನ್ನು ಹೊರಗೆ ಹಾಕಿದೆ.
ಪ್ರಸ್ತುತ ಮೈಸೂರಿನ ಜೆಎಸ್ ಎಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವಿಶ್ವನಾಥ ವ್ಯಾಸಂಗ ಮಾಡುತ್ತಿದ್ದು, ಶಾಲೆ ಆರಂಭವಾಗಿ 15 ದಿನಗಳೇ ಕಳೆದರೂ ವಿಶ್ವನಾಥ ಮಾತ್ರ ಶಾಲೆಗೆ ಹಾಜರಾಗಿಲ್ಲ. ಶಾಲಾ ಶುಲ್ಕ ಕಟ್ಟುವವರೆಗೂ ಶಾಲೆಗೆ ಬರದಂತೆ ಆಡಳಿತ ಮಂಡಳಿ ಹೇಳಿರುವ ಕಾರಣ ವಿಶ್ವನಾಥ ಶಾಲೆಗೆ ಹೋಗುತ್ತಿಲ್ಲ ಎಂದು ತಿಳಿದುಬಂದಿದೆ.
ಮಾತುಕೊಟ್ಟು ಮರೆತರೇ ಮಾಜಿ ಸಿಎಂ..!
ಐದು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮೈಸೂರು ರಸ್ತೆಯಲ್ಲಿರುವ ಬ್ಯಾಟರಾಯನಪುರ ಸ್ಲಂಗೆ ಭೇಟಿ ನೀಡಿ ಅಲ್ಲಿ ವಾಸವಿದ್ದ ವಿಶ್ವನಾಥ ಎಂಬ ಬಾಲಕನನ್ನು ದತ್ತು ಪಡೆದು ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದರು. ವಿಶ್ವನಾಥನ ಸಂಪೂರ್ಣ ವಿದ್ಯಾಬ್ಯಾಸದ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದರು. ಬಳಿಕ ಅಂದರೆ ವಿಶ್ವನಾಥನ 5 ಮತ್ತು 6ನೇ ತರಗತಿಯವರೆಗೂ ಯಡಿಯೂರಪ್ಪ ಅವರು ವಿದ್ಯಾಭ್ಯಾಸದ ಖರ್ಚು ವೆಚ್ಚ ನೋಡಿಕೊಂಡಿದ್ದರು.
ಏನಿದು ಘಟನೆ?
ಈಗ್ಗೇ 5 ವರ್ಷಗಳ ಹಿಂದೆ ಅಂದರೆ 2010 ಅಕ್ಟೋಬರ್ 16ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಗಳನ್ನು ನೋಡಲು ಸ್ಥಳೀಯ ನಿವಾಸಿಗಳೆಲ್ಲರೂ ದೇವಸ್ಥಾನಕ್ಕೆ ಆಗಮಿಸಿದ್ದರು. ಆ ಜನರ ಗುಂಪಿನಲ್ಲೇ ಈ ಪುಟ್ಟ ಬಾಲಕ ವಿಶ್ವನಾಥ ಕೂಡ ಇದ್ದ. ದೇವಾಲಯದಲ್ಲಿ ತಮ್ಮ ಬಳಿಗೆ ಬಂದ ಬಾಲಕ ವಿಶ್ವನಾಥನನ್ನು ವಿಚಾರಿಸಿದ ಯಡಿಯೂರಪ್ಪ ಅವರು ಬಳಿಕ ಬಾಲಕನನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬಂದರು.ಅಲ್ಲದೆ ದೇವಾಲಯದ ಸನ್ನಿಧಿಯಲ್ಲೇ ಬಾಲಕನನ್ನು ದತ್ತು ಸ್ವೀಕಾರ ಮಾಡಿ ಆತನ ವಿದ್ಯಾಬ್ಯಾಸದ ಸಂಪೂರ್ಣ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದರು. ಬಳಿಕ ಅಲ್ಲೇ ಪಕ್ಕದ ಸ್ಲಂನಲ್ಲಿದ್ದ ಬಾಲಕನ ಮನೆಗೆ ತೆರಳಿದ ಅವರು ಅವರ ಪೋಷಕರೊಂದಿಗೂ ಕೂಡ ಚರ್ಚೆ ನಡೆಸಿದ್ದರು. ಅಲ್ಲದೆ ಬಾಲಕನ ಹೆಸರಿನಲ್ಲಿ 1 ಲಕ್ಷ ಹಣವನ್ನು ಠೇವಣಿ ಇಡುವುದಾಗಿಯೂ ಘೋಷಣೆ ಮಾಡಿದ್ದರು.
ಈ ಹಣ ಬಾಲಕನಿಗೆ 18 ವರ್ಷ ತುಂಬಿದ ಬಳಿಕ ಕೈಸೇರುತ್ತದೆ ಎಂದು ಹೇಳಿದ್ದರು. 5 ಮತ್ತು 6ನೇ ತರಗತಿಯ ಬಾಲಕನ ಸಂಪೂರ್ಣ ವಿದ್ಯಾಬ್ಯಾಸದ ಖರ್ಚನ್ನು ವಹಿಸಿದ್ದ ಬಿಎಸ್ ವೈ ಬಾಲಕನ ಶಾಲಾ ಸಮವಸ್ತ್ರದಿಂದ ಹಿಡಿದು ಶೂವರೆಗಿನ ಎಲ್ಲ ಖರ್ಚನ್ನು ತಾವೇ ವಹಿಸಿದ್ದರು.
ದಿಕ್ಕೇ ತೋಚದಂತಾಗಿದೆ: ಬಾಲಕನ ತಾಯಿ ಶಿವಮ್ಮ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕನ ತಾಯಿ ಶಿವಮ್ಮ ಅವರು, "ಶಾಲೆ ಆರಂಭವಾಗಿ 15 ದಿನಗಳಾಯಿತು. ಶಾಲೆಯ ಆಡಳಿತ ಮಂಡಳಿ ಸಂಪೂರ್ಣ ಶುಲ್ಕ ಕಟ್ಟುವವರೆಗೂ ಮಗ ಶಾಲೆಗೆ ಬರುವುದು ಬೇಡ ಎಂದು ಕಡಾಖಂಡಿತವಾಗಿ ಹೇಳಿದ್ದಾರೆ. 50-60 ಸಾವಿರ ಹಣ ಕಟ್ಟುವಷ್ಟು ನಾವು ಶಕ್ತ್ಯರಿಲ್ಲ. ಬಾಲಕನ ಸಂಪೂರ್ಣ ವಿದ್ಯಾಬ್ಯಾಸದ ವೆಚ್ಚವನ್ನು ತಾವೇ ಭರಿಸುವುದಾಗಿಯೂ ಮತ್ತು ಆತನ ಹೆಸರಿನಲ್ಲಿ 1 ಲಕ್ಷ ಹಣ ಠೇವಣಿ ಇಟ್ಟು ಈ ಹಣ ಬಾಲಕನಿಗೆ 18 ವರ್ಷ ಆದ ಬಳಿಕ ಆತನ ಕೈ ಸೇರುತ್ತದೆ ಎಂದು ಹೇಳಿದ್ದರು. ಇದೀಗ ಅವರು ನಮ್ಮ ಸಂಪರ್ಕಕ್ಕೇ ಸಿಗುತ್ತಿಲ್ಲ. ಮುಂದೇನು ಮಾಡಬೇಕು ಎಂದು ನಮಗೂ ತೋಚುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement