
ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣಪತ್ರ ಹೊಂದಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ಬಿಎಸ್ಸಿ ಪದವಿ ಪ್ರಮಾಣ ಪತ್ರ ಕೂಡ ನಕಲು ಎಂದು ತಿಳಿದುಬಂದಿದೆ.
ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಜಿತೇಂದ್ರ ಸಿಂಗ್ ತೋಮರ್ ಅವರ ಬಿಎಸ್ಸಿ ಪದವಿ ಪತ್ರ ಕೂಡ ನಕಲು ಎಂಬುದು ಮನವರಿಕೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ಪ್ರಕಾರ ಜಿತೇಂದ್ರ ಸಿಂಗ್ ತೋಮರ್ ಅವರಿಗೆ ತಮ್ಮ ವಿದ್ಯಾಭ್ಯಾಸದ ಕುರಿತು ಯಾವುದೇ ರೀತಿಯ ಜ್ಞಾನವಿಲ್ಲ. ಅವರ ಫೈಜಾಬಾದ್ ಅವಧ್ ವಿವಿ ಮತ್ತು ಆಯೋಧ್ಯಾ ಸಾಕೇತ್ ಕಾಲೇಜಿಗೆ ಸಂಬಂಧಿಸಿದ ಶೈಕ್ಷಣಿಕ ಪ್ರಶ್ನೆಗಳಿಗೆ ತೋಮರ್ ಸರಿಯಾದ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಕಾಲೇಜು ಮೂಲಗಳ ಪ್ರಕಾರ ಜಿತೇಂದ್ರ ಸಿಂಗ್ ತೋಮರ್ ಅವರಿಗೆ ಈ ವಿಶ್ವವಿದ್ಯಾಲಯಗಳಿಂದ ಯಾವುದೇ ರೀತಿಯ ಪದವಿ ಪ್ರಮಾಣ ಪತ್ರ ನಿಡಿರುವ ಕುರಿತು ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ತೋಮರ್ ಅವರ ಕಾನೂನು ಪದವಿ ಪ್ರಮಾಣ ಪತ್ರ ಕುರಿತ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.ಆದರೆ ಬಿಹಾರದ ಮುಂಗರ್ ನಲ್ಲಿರುವ ವಿಶ್ವನಾಖ್ ಸಿಂಗ್ ಕಾನೂನು ಕಾಲೇಜಿನಲ್ಲಿ ಜಿತೇಂದ್ರ ಸಿಂಗ್ ತೋಮರ್ ಅವರ ಹೆಸರು ನೊಂದಾವಣಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿತೇಂದ್ರ ಸಿಂಗ್ ತೋಮರ್ ಅವರ ನಾಲ್ಕು ದಿನಗಳ ಬಂಧನದ ಅವಧಿ ಇಂದು ಮುಕ್ತಾಯಗೊಳ್ಳಲ್ಲಿದ್ದು, ದೆಹಲಿ ಪೊಲೀಸರು ಇಂದು ಅವರನ್ನು ಸಾಕೇತ್ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ. ಅಲ್ಲದೆ ವಿಚಾರಣೆಗಾಗಿ ಮತ್ತಷ್ಟು ದಿನಗಳ ಕಾಲಾವಕಾಶ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Advertisement