ಕನ್ನಡತಿ ಸೌಮ್ಯಶ್ರೀ "ಡಿಐಡಿ ಸೂಪರ್ ಮಾಮ್ ರನ್ನರ್ ಅಪ್"
ಮುಂಬೈ: ಜೀಟಿವಿ ನಡೆಸಿಕೊಡುವ ಖ್ಯಾತ ರಿಯಾಲಿಟಿ ಶೋ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೂಪರ್ ಮಾಮ್` ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ಫಲಿತಾಂಶ ಹೊರ ಬಿದ್ದಿದ್ದು, ಕನ್ನಡತಿ ಸೌಮ್ಯಶ್ರೀ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಕೆಲವೇ ಅಂಕಗಳ ವ್ಯತ್ಯಾಸದಿಂದ ಡಿಐಡಿ ಸೂಪರ್ ಮಾಮ್ ಪಟ್ಟ ಕನ್ನಡತಿ ಸೌಮ್ಯಶ್ರೀ ಅವರ ಕೈ ತಪ್ಪಿದ್ದು, ಮುಂಬೈ ಮೂಲದ ಮಹಿಳೆ ಹರ್ ಪ್ರೀತ್ ಖತ್ರಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಡಿಐಡಿ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ನಿನ್ನೆ ನಡೆದ ಫೈನಲ್ ಸ್ಪರ್ದೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಕಾಯುವಂತೆ ಮಾಡಿತ್ತು. ನಾಲ್ಕು ಜನ ಅಮ್ಮಂದಿರ 12 ವಾರಗಳ ಡ್ಯಾನ್ಸಿಂಗ್ ಪರೀಕ್ಷೆಯ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಹರ್ಪ್ರೀತ್ ಖತ್ರಿಸೂಪರ್ ಮಾಮ್ ಪಟ್ಟಧರಿಸಿದ್ದಾರೆ.
ಈ ಗ್ರ್ಯಾಂಡ್ ಫಿನಾಲೆಯಲ್ಲಿ ಸೌಮ್ಯಶ್ರೀಗೆ ಹರ್ಪ್ರೀತ್ ಖತ್ರಿ, ಸ್ನೇಹಾ ಅಡಪವಾರ್ ಮತ್ತು ದೀಪಾಶ್ರೀ ಚಟರ್ಜಿ ಅವರು ತೀವ್ರ ಪೈಪೋಟಿ ನೀಡಿದ್ದರು. ನಿನ್ನೆಯ ಗ್ರ್ಯಾಂಡ್ ಫಿನಾಲೆಗೆ ನಟ ಗೋವಿಂದ ಮತ್ತು ನಟಿ ಕರೀಷ್ಮಾ ಕಪೂರ್ ಜೋಡಿಯ ಡ್ಯಾನ್ಸ್ ಮೆರುಗು ನೀಡಿತ್ತು. ಇವರ ಜೊತೆ ಬಾಲಿವುಡ್ ನಟರಾದ ಶ್ರದ್ಧಾ ಕಪೂರ್, ವರುಣ್ ಧವನ್ ಮತ್ತು ಸುಶಾಂತ್ ಸಿಂಗ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ