
ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ವೀಸಾ ಕಾನೂನು ಪ್ರಕ್ರಿಯೆಯಲ್ಲಿ ಮೂವರು ಯುಪಿಎ ಸಚಿವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಲಲಿತ್ ಮೋದಿ ಟ್ವೀಟ್ ಮಾಡಿದ್ದು, ತಮ್ಮ ಮತ್ತು ಭಾರತ ನಡುವಿನ ಎಲ್ಲ ಈ ಮೇಲ್ ಮಾಹಿತಿಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮಗೆ ಯಾವುದೇ ರೀತಿಯ ಬ್ಲೂಕಾರ್ನರ್ ನೋಟಿಸ್ ಬಂದಿಲ್ಲ. ರಾಜಕೀಯ ಕಾರಣಗಳಿಗಾಗಿ ನನ್ನನ್ನು ದೋಷಿಯನ್ನಾಗಿ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ವಿಪಕ್ಷಗಳು ನನ್ನನ್ನು ದಾಳವಾಗಿ ಪ್ರಯೋಗಿಸುತ್ತಿವೆ ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದೇ ರೀತಿಯ ಹೇಳಿಕೆ ನೀಡಿರುವ ಲಲಿತ್ ಮೋದಿ ಪರ ಮೆಹಮೂದ್ ಅಬ್ದಿ ಸೋಮವಾರ ರಾತ್ರಿ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ವಿವಾದದಲ್ಲಿ ಯುಪಿಎ ಮೂವರು ಸಚಿವರನ್ನು ಎಳೆದುತಂದಿದ್ದಾರೆ. ಪಿ.ಚಿದಂಬರಂ, ಸಲ್ಮಾನ್ ಖುರ್ಷಿದ್, ಶಶಿ ತರೂರ್ ಮೇಲೆ ಆರೋಪ ಹೊರಿಸಿರುವ ಅಬ್ದಿ, ``ಈ ಸಚಿವರು ಲಲಿತ್ ಮೋದಿಗೆ ಕಿರುಕುಳ ಕೊಟ್ಟಿದ್ದಷ್ಟೇ ಅಲ್ಲ, ಬ್ರಿಟನ್‍ನಲ್ಲಿ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಲ್ಲಿ ಹಸ್ತಕ್ಷೇಪಕ್ಕೂ ಯತ್ನಿಸಿದ್ದರು'' ಎಂದು ಆರೋಪಿಸಿದ್ದಾರೆ. ಸುದ್ದಿಯೇ ಅಲ್ಲದೆ ಸಂಗತಿಯನ್ನು ವಿವಾದ ಮಾಡಲಾಗಿದೆ ಎಂದ ಅವರು, ``ಲಲಿತ್ ಅಪರಾಧಿ ಎಂದು ಯಾವ ಕೋರ್ಟ್ ತೀರ್ಪು ನೀಡಿದೆ'' ಎಂದು ಪ್ರಶ್ನಿಸಿದ್ದಾರೆ. ``ಮೋದಿ ವಿರುದ್ದ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿಲ್ಲ'' ಎಂದೂ ಹೇಳಿದ್ದಾರೆ.
ಸುಷ್ಮಾ ಮನೆ ಮುಂದೆ ಭಾರಿ ಪ್ರತಿಭಟನೆ
ವಿವಾದಕ್ಕೆ ಸಿಲುಕಿರುವ ಸಚಿವೆ ಸುಷ್ಮಾ ಸ್ವರಾಜ್ ನಿವಾಸದೆದುರು ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು. ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೂಡಲೇ ಪ್ರಧಾನಿ ಮೋದಿ ಅವರು ಸುಷ್ಮಾರಿಂದ ರಾಜಿನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ಸುಷ್ಮಾರ ಪ್ರತಿಕೃತಿಯನ್ನೂ ದಹಿಸಲಾಯಿತು.
ಕೆಲವರಂತೂ ಸುಷ್ಮಾರ ಸಪ್ಧರ್ ಜಂಗ್ ನಿವಾಸದ ಹೊರಗಿದ್ದ ಬ್ಯಾರಿಕೇಡ್‍ಗಳನ್ನು ಕೆಡವಿ ಹಾಕಿದರು. ಈ ಹಿನ್ನೆಲೆಯಲ್ಲಿ ಸುಮಾರು 100 ಪ್ರತಿ ಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು, ನಂತರ ಬಿಡುಗಡೆ ಮಾಡಿದರು.
ಪ್ರಧಾನಿ ಮೋದಿಗೂ-ಲಲಿತ್ ಮೋದಿಗೂ ಏನು ಸಂಬಂಧ?
ವೀಸಾ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದಟಛಿ ತಿರುಗಿಬಿದ್ದಿರುವ ಕಾಂಗ್ರೆಸ್, ``ಪ್ರಧಾನಿ ಮೋದಿಗೂ-ಲಲಿತ್ ಮೋದಿಗೂ ಏನು ಸಂಬಂಧ ಎಂಬುದನ್ನು ಬಹಿರಂಗಪಡಿಸಬೇಕು'' ಎಂದು ಒತ್ತಾಯಿಸಿದೆ. ಪ್ರಧಾನಿಯ ಸಮ್ಮತಿಯಿಲ್ಲದೆ ಸಚಿವೆ ಸುಷ್ಮಾ ಅವರು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಸುರ್ಜೇವಾಲಾ ಹೇಳಿದ್ದೇನು?
ಸೋಮವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ``ಲಲಿತ್ ಮೋದಿ ಅವರು ಒಬ್ಬ ದೇಶಭ್ರಷ್ಟ. ಅವರ ವಿರುದ್ದ ಭಾರತವು 8 ಶೋಕಾಸ್ ನೋಟಿಸ್‍ಗಳನ್ನು ಜಾರಿ ಮಾಡಿದೆ. ಆದರೂ ಅವರಿಗೆ ಸುಷ್ಮಾ ನೆರವಾಗಿದ್ದೇಕೆ'' ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಮತ್ತೆ 11 ಹೊಸ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
-ಮೊದಲ ಪ್ರಶ್ನೆಯು ನೇರವಾಗಿ ಪ್ರಧಾನಿ ಹಾಗೂ ಅಮಿತ್ ಶಾಗೆ ಕೇಳಲಾಗಿದೆ. ಶಾ, ಮೋದಿ, ಲಲಿತ್ ಒಟ್ಟಿಗೇ ನಿಂತಿರುವ ಫೋಟೋ ತೋರಿಸಿದ ಸುರ್ಜೇ ವಾಲಾ, ``ಇವರಿಬ್ಬರಿಗೂ ಲಲಿತ್ ಮೋದಿ ಜತೆ ಏನು ಸಂಬಂಧ'' ಎಂದು ಪ್ರಶ್ನಿಸಿದ್ದಾರೆ.
-ಪ್ರಧಾನಿ, ವಿತ್ತ ಸಚಿವರ ಒಪ್ಪಿಗೆ ಪಡೆಯದೇ ಭಾರತ ಸರ್ಕಾರದ ಆಕ್ಷೇಪವನ್ನು ಮತ್ತು ಲಿಖಿತ ಹೇಳಿಕೆಯನ್ನು ವಾಪಸ್ ಪಡೆಯುವ ಅಧಿಕಾರ ವಿದೇಶಾಂಗ ಸಚಿವರಿಗಿದೆಯೇ? ಇದರಲ್ಲಿ ಪ್ರಧಾನಿ ಪಾತ್ರವೇನು?
-ಇದಕ್ಕಿಂತ ಉತ್ತಮ `ಹಿತಾಸಕ್ತಿ ಸಂಘರ್ಷ' ಪ್ರಕರಣ ವಿರಲಿಕ್ಕಿಲ್ಲ. ಇಲ್ಲಿ ಪ್ರಧಾನಿ ನಡತೆಯ ಬಗ್ಗೆಯೂ ತನಿಖೆಯಾಗಬೇಕು.
ಪ್ರಧಾನಿ ಮೋದಿ ಅವರು ಮೊದಲು ಲಲಿತ್ ಮೋದಿಯನ್ನು ರಕ್ಷಿಸುವುದನ್ನು ನಿಲ್ಲಿಸಲಿ. ಸಚಿವೆ ಸುಷ್ಮಾರನ್ನು ವಜಾ ಮಾಡಲಿ.
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಪೋರ್ಚುಗೀಸ್ ಕಾನೂನಿನ ಪ್ರಕಾರ, ಪತ್ನಿಯ ಶಸ್ತ್ರಚಿಕಿತ್ಸೆ ವೇಳೆ ಪತಿಯ ಸಹಿ ಅಗತ್ಯವಿಲ್ಲ. ಇದನ್ನು ನೋಡಿದರೆ ಸಚಿವೆ ಸುಷ್ಮಾ ಅವರ ಮಾನವೀಯ ನೆಲೆಯ ಸಹಾಯ
ಸಂಪೂರ್ಣ ಬೋಗಸ್ ಎಂಬುದು ತಿಳಿಯುತ್ತದೆ.
-ಪಿ.ಎಲ್. ಪೂನಿಯಾ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ
ಕಾಂಗ್ರೆಸ್‍ಗೆ ಪ್ರತಿದಿನ ರಾಜಿನಾಮೆ ಕೇಳುವುದು ಬಿಟ್ಟು ಬೇರೆ ಯಾವ ಕೆಲಸವೂ ಇಲ್ಲ. ನಮ್ಮ ಪಕ್ಷ ಮತ್ತು ಭಾರತೀಯರು ಸುಷ್ಮಾಗೆ ಬೆಂಬಲವಾಗಿ ನಿಲ್ಲುತ್ತೇವೆ.
-ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ
Advertisement