
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ 100 ಕೋಟಿ ಲಂಚ ಆರೋಪ ಪ್ರಕರಣ ಕುರಿತು ವ್ಯಾಪಕ ಟೀಕೆಗೆ ಗುರಿಯಾಗಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರ ರಾಜಿನಾಮೆಗೆ ದಿನೇ ದಿನೇ ಒತ್ತಡಗಳು ಹೆಚ್ಚುತ್ತಿದ್ದು, ಮಾಜಿ ಲೋಕಾಯುಕ್ತರು, ವಕೀಲರು ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ನಾಯಕರು ರಾಜಿನಾಮೆಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ನಿನ್ನೆ ವಕೀಲರ ಸಂಘ ತುರ್ತು ಸಭೆ ಕರೆದಿತ್ತು. ಸಭೆಯ ಬಳಿಕ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಪಿಪಿ ಹೆಗ್ಡೆ ಅವರು, ಲೋಕಾಯುಕ್ತ ನ್ಯಾ.ವೈ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್, ಕೃಷ್ಣ ರಾವ್ ಹಾಗೂ ಲೋಕಾಯುಕ್ತ ಪಿಆರ್ಒ ಸಯೀದ್ ರಿಯಾಝ್ ಅವರ ವಿರುದ್ಧ ಈ ಕೂಡಲೇ ಎಫ್ಐಆರ್ ದಾಖಲಿಸಬೇಕು ಮತ್ತು ನ್ಯಾ.ಭಾಸ್ಕರ್ ರಾವ್ ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘ ನ್ಯಾ. ಭಾಸ್ಕರ್ ರಾವ್ ಅವರ ಪ್ರಕರಣಗಳನ್ನು ಬಹಿಷ್ಕರಿಸಲು ಮತ್ತು ಅವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಹೆಗ್ಡೆ ತಿಳಿಸಿದರು.
ಇದೇ ವೇಳೆ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಲೋಕಾಯುಕ್ತರಿಂದ ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ರಾಜಿನಾಮೆ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಕೀಲರ ಸಂಘ ಹಾಗೂ ಆಮ್ ಆದ್ಮಿ ಪಕ್ಷ ಎಚ್ಚರಿಕೆ ನೀಡಿದೆ.
Advertisement