
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ 2015-16ನೇ ಸಾಲಿನ ಬಜೆಟ್ ಜನಪರತೆಗಿಂತಲೂ ಜನಪ್ರಿಯತೆಗೇ ಹೆಚ್ಚಿನ ಒತ್ತು ನೀಡಿದಂತಿದೆ.
ಪ್ರಮುಖವಾಗಿ ಪಂಚಾಯತಿ ಚುನಾವಣೆ ಸಮೀಪದಲ್ಲೇ ಇರುವುದರಿಂದ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಜನರನ್ನು ಸೆಳೆಯುವ ಉತ್ತಮ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. ಬಜೆಟ್‌ನಲ್ಲಿ ಒಟ್ಟು 1,39,476 ಕೋಟಿ ರು.ಗಳ ಆದಾಯವನ್ನು ತೋರಿಸಲಾಗಿದೆಯಾದರೆ ಖರ್ಚನ್ನು ಮಾತ್ರ 1,42,534 ಕೋಟಿ ರು.ಗಳೆಂದು ಹೇಳಲಾಗಿದೆ. ಇದರ ಯೋಜನಾ ಗಾತ್ರ 72,597 ಸಾವಿರ ಕೋಟಿ ರೂ. ಇದರಲ್ಲಿ ಸರಕಾರದ ಸಂಪನ್ಮೂಲಗಳು 67,882 ಸಾವಿರ ಕೋಟಿ ರುಪಾಯಿ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸಂಪನ್ಮೂಲ 8,645 ಕೋಟಿ ರುಪಾಯಿಗಳಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಜೆಟ್ ಯೋಜನಾ ಗಾತ್ರ ಶೇ.10.67ರಷ್ಟು ಹಿಗ್ಗಿದೆ ಎಂಬುದನ್ನು ಹೊರತು ಪಡಿಸಿದರೆ, ಪ್ರಸ್ತುತ ಸಾಲಿನ ಬಜೆಟ್ ಅನ್ನು ಕೊರತೆಯ ಬಜೆಟ್ ಎಂದು ಹೇಳಬಹುದು.
ಪ್ರಮುಖ ಆಧ್ಯತಾ ವಲಯಗಳಿಗೇ ಇಲ್ಲ ಆಧ್ಯತೆ
ಪ್ರಸಕ್ತ ಸಾಲಿನ ಬಜೆಟ್ ಅನ್ನು ಕೇವಲ ಜನಪ್ರಿಯ ಕಾರ್ಯಕ್ರಮಗಳಿಗೇ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಕೃಷಿ, ನೀರಾವರಿ, ವಿದ್ಯುತ್ ನಂತಹ ಆಧ್ಯತಾವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಇನ್ನು ಪ್ರಮುಖವಾಗಿ ಶಿಕ್ಷಣ ವಲಯಕ್ಕೆ ಕಳೆದ ಬಾರಿ ನೀಡಿದ್ದಷ್ಟು ಪ್ರಮಾಣದ ಅನುದಾನವನ್ನು ಈ ಬಾರಿ ಘೋಷಣೆ ಮಾಡಿಲ್ಲ. 71 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 44 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 10 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 10 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ಈಗಿರುವ ಶಾಲಾ-ಕಾಲೇಜುಗಳಲ್ಲಿಯೇ ಸಾಕಷ್ಟು ಪ್ರಮಾಣದ ಶಿಕ್ಷಕರ ಕೊರತೆ ಉಂಟಾಗಿದೆ. ಇನ್ನು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 2160 ಶಿಕ್ಷಕರ ಕೊರತೆ ಇದೆ. ಕಳೆದ ಸಾಲಿನ ಬಜೆಟ್ ನಲ್ಲಿ ಶಿಕ್ಷಕರ ನೇಮಕ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜ್ಞಾನಕೇಂದ್ರಗಳ ಸ್ಥಾಪನೆ, ಉತ್ತರ ಕರ್ನಾಟಕ ಭಾಗದ ಶಾಲೆಗಳ ಉನ್ನತೀಕರಣದಂತಹ ಕೆಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.
ಆದರೆ ಈವರೆಗೂ ಕಳೆದ ಬಾರಿ ಘೋಷಣೆ ಮಾಡಲಾಗಿದ್ದ ಸಾಕಷ್ಟು ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಇದರಿಂದ ಕಳೆದ ಬಾರಿಯ ಬಜೆಟ್‌ನಿಂದ ಗುಣಮಟ್ಟದ ಶಿಕ್ಷಣಕ್ಕೆನಿರೀಕ್ಷಿತ ಮಟ್ಟದ ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲಾ-ಕಾಲೇಜುಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆಯಾದರೂ, ಉತ್ತಮ ಗುಣಮ್ಟಟದ ಶಿಕ್ಷಕರ ನೇಮಕಾತಿಗೆ ಮಾತ್ರ ಸರ್ಕಾರ ಮುಂದಾಗುತ್ತಿಲ್ಲ. ಕಳೆದ 7 ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದಿರುವುದೇ ಇದಕ್ಕೆ ಸಾಕ್ಷಿ ಎನ್ನಬಹುದು. ಶಿಕ್ಷಣ ವಲಯಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ಪೈಕಿ ಬಹುತೇಕ ಪ್ರಮಾಣದ ಹಣ ಶಿಕ್ಷಕರ ಮತ್ತು ಶಾಲಾ ಸಿಬ್ಬಂದಿಗಳ ವೇತನಕ್ಕೆ ಸರಿಹೋಗುತ್ತದೆ. ಇನ್ನುಳಿದ ಪಾಲಿನಲ್ಲಿ ಶಾಲಾ-ಕಾಲೇಜುಗಳ ಮೂಲಸೌಕರ್ಯಗಳ ಅಭಿವೃದ್ಧಿ ಸಾಧ್ಯವೇ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇದರಿಂದ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗಳತ್ತ ಮುಖಮಾಡುವ ಅಪಾಯ ಕೂಡ ಇದೆ ಎಂಬುದನ್ನು ಮರೆಯುವಂತಿಲ್ಲ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಶೇ.1ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈಗಾಗಲೇ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ನೀಡಲಾಗುತ್ತಿದೆ. ಸರ್ಕಾರದ ಸುಂಕ ಹೆಚ್ಚಳದ ಕ್ರಮದಿಂದಾಗಿ ಕರ್ನಾಟಕದಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಳವಾಗಲಿದೆ. ಮುಂಬರುವ ಏಪ್ರಿಲ್ ತಿಂಗಳಿನಿಂದಲೇ ನೂತನ ದರ ಜಾರಿಯಾಗಲಿದೆ. ಹೀಗಾಗಿ ಸರ್ಕಾರದ ಈ ಕ್ರಮ ಜನತೆಯ ಮೇಲೆ ಹೊರಯಾಗುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಕೇಂದ್ರದಲ್ಲಿ ಇಂಧನ ದರ ಇಳಿಕೆಯಾದರೂ ಸಹ ಅದರ ಲಾಭ ಮಾತ್ರ ಗ್ರಾಹಕರಿಗೆ ಸಂಪೂರ್ಣವಾಗಿ ದೊರೆಯುವುದಿಲ್ಲ.
ರೈತರಿಗೆ ದೊರೆಯುತ್ತಿಲ್ಲ "ಕೃಷಿ ಭಾಗ್ಯ"
ಇನ್ನು ಕೃಷಿ ವಿಭಾಗದಲ್ಲಿ ಕಳೆದ ಬಾರಿ ಘೋಷಣೆ ಮಾಡಲಾಗಿದ್ದ ಬೀಜೋತ್ಪಾದನೆಗೆ ಪ್ರೋತ್ಸಾಹಿಸುವ ರಿಯಾಯಿತಿ ಯೋಜನೆಗೆ ಸರ್ಕಾರದಿಂದಲೇ ಹೇಳಿಕೊಳ್ಳುವಂತಹ ಪ್ರೋತ್ಸಾಹ ದೊರೆಯುತಿಲ್ಲ. ಬೀಜ ಪ್ರಮಾಣೀಕರಣ ಶುಲ್ಕದಲ್ಲಿ ರಿಯಾಯ್ತಿ ಮತ್ತು ಬೀಜೋತ್ಪಾದನೆಗೆ ಪ್ರೋತ್ಸಾಹಧನ ನೀಡಲು 5 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈವರೆಗೂ ಹೇಳಿಕೊಳ್ಳುವಂತಹ ಪ್ರಮಾಣದಲ್ಲಿ ಸರ್ಕಾರ ಹಣ ಖರ್ಚು ಮಾಡಿಲ್ಲ. ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೂ ಕೂಡ ಕೃಷಿ, ಕೈಗಾರಿಕೆ ಮತ್ತು ವಿದ್ಯುತ್ ವಲಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರದೃಷ್ಟಿಯ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿಲ್ಲ.
ನೀರಾವರಿಗೆ ಸಂಬಂಧಿಸಿದಂತೆ ಮೇಕೆದಾಟು ಬಳಿ 25 ಕೋಟಿ ರುಪಾಯಿ ವೆಚ್ಚದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನಾ ಜಲಾಶಯಗಳ ನಿರ್ಮಾಣ ಘೋಷಣೆ ಹೊರತುಪಡಿಸಿದರೆ ಇಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಘೋಷಣೆ ಮಾಡಿಲ್ಲ. ಈ ಹಿಂದೆ ಘೋಷಣೆ ಮಾಡಿದ್ದ ಯೋಜನೆಗಳ ಅನ್ವಯ ಖರ್ಚು ಮಾಡಲು ಯೋಜನೆ ಸಿದ್ಧವಾಗಿದ್ದರೂ ಸರ್ಕಾರದಿಂದ ಪೂರ್ಣಪ್ರಮಾಣದ ಹಣ ಬಿಡುಗಡೆಯಾಗದ ಕಾರಣ ಈ ವರ್ಷ ನಿರೀಕ್ಷಿತ ಜಲಭಾಗ್ಯ ಒದಗಿಸುವುದು ಜಲಸಂಪನ್ಮೂಲ ಇಲಾಖೆಗೆ ಕಷ್ಟ ಎನ್ನುವಂತಾಗಿದೆ.
ಅಧಿಕಾರಕ್ಕೆ ಬಂದಾಗ ಮುಂದಿನ ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ 10 ಸಾವಿರ ಕೋಟಿ ರುಪಾಯಿಗಳಂತೆ ಒಟ್ಟು 50 ಸಾವಿರ ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಘೋಷಿಸಿದ್ದ ಸರ್ಕಾರ, 2014-15ನೇ ಸಾಲಿಗೆ ಭಾರೀ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ನಿಗದಿತ 10 ಸಾವಿರ ಕೋಟಿ ರೂ. ಹಾಗೂ ಸಣ್ಣ ನೀರಾವರಿಗೆ 1349 ಕೋಟಿ ಅನುದಾನ ನಿಗದಿಪಡಿಸಿತ್ತು. ಆದರೆ, ಭಾರೀ ಮತ್ತು ಮಧ್ಯಮ ನೀರಾವರಿಗೆ ಬಜೆಟ್‌ನಲ್ಲಿ ನಿಗದಿಪಡಿಸಿದ 10 ಸಾವಿರ ಕೋಟಿ ರು. ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ. ಫೆಬ್ರವರಿ ಅಂತ್ಯದ ವೇಳೆಗೆ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಸುಮಾರು 8,500 ಕೋಟಿ ರೂ. ಬಿಡುಗಡೆಯಾಗಿದ್ದು, ಬಿಡುಗಡೆಯಾದ ಅನುದಾನವನ್ನು ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ.
ವಿದ್ಯುತ್ ಖರೀದಿಗೆ ನೀಡಿರುವ ಪ್ರಾಶಸ್ತ್ಯವನ್ನು ಉತ್ಪಾದನೆಗೆ ನೀಡಿಲ್ಲ ಇದಲ್ಲದೆ ಪ್ರಸಕ್ತ ಸಾಲಿನ ಬಜೆಟ್ ಅನ್ನು ಗಮನಿಸಿದರೆ ವಿದ್ಯುತ್ ವಲಯಕ್ಕೂ ಕೂಡ ಸರ್ಕಾರ ಹೆಚ್ಚಿನ ಆದ್ಯತೆ ನೀಡಿಲ್ಲ ಎಂದೆನಿಸುತ್ತದೆ. ಏಕೆಂದರೆ ಯಲಹಂಕದಲ್ಲಿ 350 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯ ಘೋಷಣೆಯನ್ನು ಹೊರತು ಪಡಿಸಿದರೆ ವಿದ್ಯುತ್ ಉತ್ಪಾದನೆ ಮಾಡಬಲ್ಲ ಯಾವುದೇ ಪ್ರಮುಖ ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿಲ್ಲ. ಇದೂ ಸಹ ಸರ್ಕಾರಕ್ಕೆ ಹಿನ್ನಡೆಯಾಗಲಿದೆ.
ಆರಂಭದಲ್ಲೇ 20 ಸಾವಿರ ಕೋಟಿ ಕೊರತೆ
2015-16ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 1,39,476 ಕೋಟಿ ರೂ.ಗಳ ಆದಾಯ ತೋರಿಸಲಾಗಿದೆಯಾದರೆ ಖರ್ಚನ್ನು ಮಾತ್ರ 1,42,534 ಕೋಟಿ ರೂ.ಗಳೆಂದು ಹೇಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಜೆಟ್ ಯೋಜನಾ ಗಾತ್ರ ಶೇ.10.67ರಷ್ಟು ಹಿಗ್ಗಿದೆ. ಆದರೆ ಒಟ್ಟಾರೆ ಬಜೆಟ್ ನಲ್ಲಿ 20 ಸಾವಿರ ಕೋಟಿ ಹಣದ ಕೊರತೆ ಉಂಟಾಗಿದೆ. ವರ್ಷದ ಆರಂಭದಲ್ಲೇ 20 ಸಾವಿರ ಕೋಟಿ ಕೊರತೆಯಾದರೆ ವರ್ಷಾಂತ್ಯದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದ ವರ್ಷದ ಬಜೆಟ್ ನಲ್ಲಿ ನಿರೀಕ್ಷಿಸಲಾಗಿದ್ದ ಆದಾಯದ ಪ್ರಮಾಣದ ಪೈಕಿ ಶೇ.80 ರಷ್ಟು ಆದಾಯವನ್ನು ಮಾತ್ರ ಕಲೆಹಾಕಲಾಗಿದ್ದು, ಶೇ.20ರಷ್ಟು ಆದಾಯ ಸಂಗ್ರಹಣೆ ಹಾಗೇ ಉಳಿದಿದೆ. ಹೀಗಾಗಿ ಉಳಿದ ಈ 20 ಸಾವಿರ ಕೋಟಿ ರು.ಗಳನ್ನು ಸರ್ಕಾರ ಹೇಗೆ ಕಲೆ ಹಾಕುತ್ತದೆ ಎಂಬುದು ಕೂಡ ಪ್ರಶ್ನೆಯಾಗಿ ಉಳಿಯುತ್ತದೆ. ಇನ್ನು ಕಳೆದ ವರ್ಷ ಘೋಷಣೆ ಮಾಡಲಾಗಿದ್ದ ಖರ್ಚುಗಳ ಪೈಕಿ ಶೇ.50 ರಷ್ಟು ಹಣವನ್ನು ಮಾತ್ರ ಖರ್ಚು ಮಾಡಲಾಗಿದೆ.
ಪ್ರಮುಖ ಆಧ್ಯತಾ ವಲಯವಾದ ಕೃಷಿ ಕ್ಷೇತ್ರದಲ್ಲಿ ಈ ಪ್ರಮಾಣ ಇಳಿದಿದ್ದು, ಶೇ.40 ರಷ್ಟು ಮಾತ್ರ ಕೃಷಿ ಕ್ಷೇತ್ರಕ್ಕೆ ಖರ್ಚು ಮಾಡಲಾಗಿದೆ. ಉದ್ಯೋಗ ಸೃಷ್ಟಿ ಮಾಡಬಲ್ಲ ಯೋಜನೆಗಳೂ ಕೂಡ ಪ್ರಸಕ್ತ ಸಾಲಿನ ಬಜೆಟ್ ಘೋಷಣೆ ಮಾಡದಿರುವುದು ಸರ್ಕಾರದ ದೂರದೃಷ್ಟಿಯ ಕೊರತೆಯನ್ನು ಸಾರುತ್ತದೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಪರವಲ್ಲದ ಜನಪ್ರಿಯ ಬಜೆಟ್ ಎಂಬ ಟೀಕೆಗೂ ಕೂಡ ಒಳಗಾಗಿದೆ.
-ಶ್ರೀನಿವಾಸ ಮೂರ್ತಿ ವಿಎನ್
Advertisement