ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರವಿ ಅವರ ಪೋಷಕರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ.
ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ ಹಾಗೂ ಸಹೋದರ ರಮೇಶ್ ಸೇರಿದಂತೆ ಹಲವು ಸಂಬಂಧಿಕರು ಇಂದು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು, ಪೋಷಕರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು.
ಮಗನನ್ನು ಕಳೆದುಕೊಂಡ ನೋವು ನಮಗೂ ಅರ್ಥ ಆಗುತ್ತೆ. ರವಿ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿನ ಕುರಿತು ಸಮರ್ಪಕ ತನಿಖೆ ನಡೆಸುತ್ತೇವೆ. ಸಿಐಡಿ ತನಿಖೆಯ ಮೇಲೆ ವಿಶ್ವಾಸವಿಡಿ ಎಂದು ಸಿಎಂ ಮನವಿ ಮಾಡಿದರು.
ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ, ಯುಗಾದಿಯ ನಂತರ ಸಿಬಿಐ ತನಿಖೆಗೆ ಒಪ್ಪಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಪೋಷಕರು ಮರಣೋತ್ತರ ಪರೀಕ್ಷಾ ವರದಿ ಬರುವವರೆಗೂ ಪ್ರತಿಭಟನೆ ಮುಂದೂವರೆಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಪ್ರತಿಭಟನಾ ನಿರತ ರವಿ ಪೋಷಕರನ್ನು ಮುಖ್ಯಮಂತ್ರಿಗಳ ಕಚೇರಿ ಮಾತುಕತೆಗೆ ಆಹ್ವಾನ ನೀಡಿತ್ತು, ಆದರೆ ಆಹ್ವಾನವನ್ನು ತಿರಸ್ಕರಿಸಿದ್ದ ಪೋಷಕರು, ತಮ್ಮ ಮಗನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೆ ತಾವು ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲ ಎಂದಿದ್ದರು. ಅಲ್ಲದೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸದಿದ್ದರೆ ತಾವು ವಿಧಾಸೌಧದ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದರು.
Advertisement