ಶಾಸಕ ನಾರಾಯಣಸ್ವಾಮಿಯಿಂದ ರವಿಗೆ ಬೆದರಿಕೆ ಇತ್ತು: ಹನುಮಂತರಾಯಪ್ಪ ನೇರ ಆರೋಪ

ಸೋಮವಾರ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಅವರಿಗೆ ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಅವರಿಂದ ಬೆದರಿಕೆ ಇತ್ತು ಎಂದು ರವಿ ಅವರ ಮಾವ..
ಹನುಮಂತರಾಯಪ್ಪ (ಸಂಗ್ರಹ ಚಿತ್ರ)
ಹನುಮಂತರಾಯಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಅವರಿಗೆ ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಅವರಿಂದ ಬೆದರಿಕೆ ಇತ್ತು ಎಂದು ರವಿ ಅವರ ಮಾವ ಹನುಮಂತರಾಯಪ್ಪ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ರವಿ ಮಾವ ಹನುಮಂತರಾಯಪ್ಪ ಅವರು, ನನ್ನ ಅಳಿಯ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಕೌಟುಂಬಿಕ ಕಲಹದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಕಾನ್ಫಿಡೆಂಟ್ ಗ್ರೂಪ್ ರೆಸಾರ್ಟ್ ಒತ್ತುವರಿ ಪ್ರಕರಣ ಸಂಬಂಧ ರವಿ ಕ್ರಮಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಬಂಗಾರಪೇಟೆ ಶಾಸಕರಾದ ನಾರಾಯಣ ಸ್ವಾಮಿ ವಿರೋಧ ವ್ಯಕ್ತಪಡಿಸಿ, ರವಿ ಅವರ ಮೇಲೆ ಒತ್ತಡ ಹೇರಿದ್ದರು.

ಆದರೆ ಇದಕ್ಕೆ ಜಗ್ಗದ ರವಿ ರೆಸಾರ್ಟ್ ಒತ್ತುವರಿ ತೆರವಿಗೆ ಮುಂದಾಗಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಬಳಿಕ ಈ ಬಗ್ಗೆ ರವಿಗೆ ಸಾಕಷ್ಟು ಬೆದರಿಕೆ ಕರೆಗಳು ಕೂಡ ಬಂದಿದ್ದವು ಎಂದು ಹನುಮಂತರಾಯಪ್ಪ ಅವರು ಹೇಳಿದ್ದಾರೆ. ರವಿ ಒಂದೆರಡು ಬಾರಿ ನನಗೆ ಈ ಕೆಲಸ ಸಾಕಾಗಿ ಹೋಗಿದೆ. ಸದಾಕಾಲ ಒತ್ತಡದಲ್ಲಿ ಕೆಲಸ ಮಾಡಬೇಕಿದೆ ಎಂದು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ರವಿ ವರ್ಗಾವಣೆಗೆ ನಾನೇ ಮನವಿ ಮಾಡಿದ್ದೆ
ಇನ್ನು ಕೋಲಾರದಿಂದ ರವಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರವನ್ನು ನಾನೇ ಕೇಳಿಕೊಂಡಿದ್ದೆ. ಕೋಲಾರದಿಂದ ಡಿಕೆ ರವಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡುವಂತೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ ಎಂದು ಹನುಮಂತರಾಯಪ್ಪ ಹೇಳಿದ್ದಾರೆ.

ಕುಟುಂಬದಲ್ಲಿ ಯಾವುದೇ ರೀತಿಯ ಒಡಕಿರಲಿಲ್ಲ
ಇನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಒಡಕಿರಲಿಲ್ಲ. ನನ್ನ ಮಗಳು ರವಿ ಅವರ ತಂದೆ-ತಾಯಿಗಳನ್ನು ಮನೆಗೆ ಕರೆಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂಬ ಊಹಾಪೋಹಗಳು ಸತ್ಯಕ್ಕೆ ದೂರವಾದವು. ರವಿ ಅವರ ತಂದೆ-ತಾಯಿಯನ್ನು ಕರೆಸಿಕೊಳ್ಳಲೆಂದೇ ಇವರು ತಮ್ಮ ನಿವಾಸವನ್ನು ಬದಲಿಸಿಕೊಂಡಿದ್ದರು. ರವಿ ಪತ್ನಿಯೇ ಅವರ ತಂದೆತಾಯಿಯನ್ನು ಮನೆಗೆ ಕರೆಸಿಕೊಳ್ಳುವ ಕುರಿತು ತಮ್ಮೊಂದಿಗೆ ಮಾತನಾಡಿದ್ದರು ಎಂದು ಹನುಮಂತರಾಯಪ್ಪ ಅವರು ಹೇಳಿದ್ದಾರೆ.

ಸೋಮವಾರ ನಡೆದದ್ದೇನು..?
ನಾನು ಮತ್ತು ರವಿ ಸ್ನೇಹಿತರಂತೆ ಇದ್ದೆವು. ಮಾ.16ರ ಸೋಮವಾರ ಬೆಳಗ್ಗೆ 9.30ಕ್ಕೆ ರವಿ ಅವರ ಜೊತೆಗೆ ಕುಳಿತುಕೊಂಡು ತಿಂಡಿ ತಿಂದಿದ್ದೆ. ಮಧ್ಯಾಹ್ನದ ಊಟಕ್ಕೂ ನಮ್ಮ ಮನೆಯಿಂದಲೇ ಊಟವನ್ನು ಕಳಿಸಲಾಗಿತ್ತು. 'ರವಿ ಅವರು ಬೆಳಗ್ಗೆ ನಮ್ಮ ಮನೆಯಿಂದಲೇ ತಿಂಡಿ ತಿಂದು ಕಚೇರಿಗೆ ಹೋದರು. ಅವರು ಕಚೇರಿಗೆ ಹೋದ ಮೇಲೆ ತುರ್ತು ಕೆಲಸಗಳಿದ್ದರೆ ಮಾತ್ರ ಕರೆ ಮಾಡುತ್ತಿದ್ದರು. ಆದರೆ, ಸೋಮವಾರ ರವಿ ನಮ್ಮ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಸಂಜೆ 4 ಗಂಟೆ ನಂತರ ನನ್ನ ಮಗಳು ಕುಸುಮಾ ಕಚೇರಿಗೆ ಕರೆ ಮಾಡಿದಾಗ ಮನೆಗೆ ಹೋಗಿದ್ದಾರೆ' ಎಂದು ಸಿಬ್ಬಂದಿಗಳು ಹೇಳಿದ್ದರು.

'ಸಂಜೆ 6.45ರ ಸುಮಾರಿಗೆ ನಾವು ಅಪಾರ್ಟ್‌ಮೆಂಟ್‌ಗೆ ಹೋದೆವು. ಮಗಳು ಕೀ ತೆಗೆದು ಒಳಗೆ ಹೋದಳು ರೂಂನೊಳಗೆ ಹೋಗುತ್ತಿದ್ದಂತೆ ಕಿರುಚಿಕೊಂಡು ಬಿದ್ದಳು. ನಾನು ಹೋಗಿ ನೋಡಿದಾಗ ರವಿ ಅವರ ದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅವರ ಕೈ ಮುಟ್ಟಿ ನೋಡಿದಾಗ ಅವರು ಸತ್ತಿದ್ದಾರೆ ಎಂದು ತಿಳಿಯಿತು' ನಂತರ ಪೊಲೀಸರಿಗೆ ಮಾಹಿತಿ ನೀಡಿದೆ ಎಂದರು. ಅಲ್ಲದೆ ತನಿಖೆಗೆ ಕುಟುಂಬದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ, ಸಿಬಿಐ ತನಿಖೆಯಾಗಲಿ ಅಥವಾ ಇನ್ನಿತರೆ ಯಾವುದೇ ಉನ್ನತ ತನಿಖೆ ಕೂಡ ಆಗಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹನುಮಂತರಾಯಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com