ಸಿಐಡಿಗೆ ಹೇಳಿಕೆ ನೀಡಲು ನಿರಾಕರಿಸಿದ ಡಿ.ಕೆ. ರವಿ ಕುಟುಂಬ
ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಒತ್ತಡ ಮತ್ತಷ್ಟು ಹೆಚ್ಚುತ್ತಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ರವಿ ಕುಟುಂಬ ನಿರಾಕರಿಸಿದೆ.
ಪ್ರಕರಣದ ಕುರಿತು ಪೋಷಕರ ಹೇಳಿಕೆ ಪಡೆಯಲು ಸಿಐಡಿ ತಂಡ ಇಂದು ರವಿ ಅವರ ಸ್ವಗ್ರಾಮ ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲಕ್ಕೆ ತೆರಳಿದ್ದರು. ಆದರೆ ಹೇಳಿಕೆ ನೀಡಲು ನಿರಾಕರಿಸಿರುವ ಪೋಷಕರು, ಸಿಬಿಐಗೆ ಮಾತ್ರ ತಾವು ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
ನಮಗೆ ಸಿಐಡಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕು ಎಂದು ಒತ್ತಾಯಿಸಿರುವ ರವಿ ಅವರ ತಾಯಿ ಗೌರಮ್ಮ, ಒಂದು ವೇಳೆ ಸರ್ಕಾರ ಸಿಬಿಐಗೆ ಒಪ್ಪಿಸದಿದ್ದರೆ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಸಿಐಡಿ ಅಧಿಕಾರಿಗಳು ರವಿ ಅವರ ಸಹೋದರ ರಮೇಶ್ ಹಾಗೂ ಸಹೋದರಿ ಭಾರತಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸಚಿವ ಸಂಪುಟ ಸ್ಪಷ್ಟವಾಗಿ ನಿರಾಕರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ