
ಹೈದರಾಬಾದ್: ಎರಡು ದಿನಗಳ ಹಿಂದೆ ಮೃತಪಟ್ಟ ಸಿಂಗಪುರದ ಮೊದಲ ಪ್ರಧಾನಿ ಲೀ ಕೌನ್ ಯು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಿಂಗಪುರಕ್ಕೆ ತೆರಳಲು ಯೋಜಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದ ಘಟನೆ ನಡೆದಿದೆ. ಸಿಂಗಪುರಕ್ಕೆ ತೆರಳುವ ನಾಯ್ಡು ಅವರ ಮನವಿಯನ್ನು ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ೨೯ರಂದು ಲೀ ಕೌನ್ ಅವರ ಕೊನೆಯ ವಿಧಿಗಳಲ್ಲಿ ಭಾಗಿಯಾಗುತ್ತಿರುವುದರಿಂದ ನಾಯ್ಡು ಅವರಿಗೆ ಸಿಂಗಪುರಕ್ಕೆ ಹೋಗಲು ಅವಕಾಶ ನೀಡಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಆಂಧ್ರ ಸರ್ಕಾರಕ್ಕೆ ತಿಳಿಸಿದೆ. ಈ ಮನವಿ ತಿರಸ್ಕೃತಗೊಂಡಿರುವುದರಿಂದ ನರೇಂದ್ರ ಮೋದಿಯವರ ತಂಡದ ಭಾಗವಾಗಿಯೇ ಲೀ ಅವರ ಅಂತ್ಯಸಂಸ್ಕಾರಕ್ಕೆ ತೆರಳಲು ಅವಕಾಶ ಕೋರಿ ಮತ್ತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
"ಸಿಂಗಪುರಕ್ಕೆ ತೆರಳುತ್ತಿರುವ ದೆಹಲಿ ಸರ್ಕಾರದ ತಂಡದ ಬಗ್ಗೆ ಮಾಹಿತಿ ನಿರೀಕ್ಷಿಸುತ್ತಿದ್ದೇವೆ. ನಾಯ್ಡು ಅವರ ಹೆಸರು ಅದರಲ್ಲಿ ಇರುತ್ತದೆ ಎಂದು ನಂಬಿದ್ದೇವೆ. ಗುರುವಾರದೊಳಗೆ ಸ್ಪಷ್ಟೀಕರಣ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ" ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ಬುಧವಾರ ರಾತ್ರಿಯೇ ಚಂದ್ರಬಾಬು ನಾಯ್ಡು ಸಿಂಗಪುರಕ್ಕೆ ತೆರಳಬೇಕಿತ್ತು.
ಇದಕ್ಕೂ ಮುಂಚೆ ಅವರು ಮಾರ್ಚ್ ೨೦ ಮತ್ತು ೩೦ ರಂದು ತಮ್ಮ ರಾಜಧಾನಿ ನಿರ್ಮಾಣಕ್ಕೆ ಯೋಜನೆ ತಯಾರಿಸಲು ಸಿಂಗಪುರಕ್ಕೆ ತೆರಳುವುವರಿದ್ದರು.
Advertisement