ಉದ್ದೇಶಪೂರ್ವಕ ಕೃತ್ಯಕ್ಕೆ ಬಲಿಯಾದ್ರು 150 ಮಂದಿ

ವಿಮಾನ ದುರಂತಕ್ಕೆ ಕಾರಣ ಗೊತ್ತಾಗಿದ್ದು, ಇದು ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು...
ವಿಮಾನ ಅಪಘಾತ ನಡೆದ ಸ್ಥಳ (ಒಳಚಿತ್ರ-ವಿಮಾನವನ್ನು ಪರ್ವತಕ್ಕೆ ಗುದ್ದಿದ ಆರೋಪ ಹೊತ್ತಿರುವ ಕೋ-ಪೈಲಟ್)
ವಿಮಾನ ಅಪಘಾತ ನಡೆದ ಸ್ಥಳ (ಒಳಚಿತ್ರ-ವಿಮಾನವನ್ನು ಪರ್ವತಕ್ಕೆ ಗುದ್ದಿದ ಆರೋಪ ಹೊತ್ತಿರುವ ಕೋ-ಪೈಲಟ್)

ಪ್ಯಾರಿಸ್: ಎರಡು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ ನ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಜರುಗಿದ ವಿಮಾನ ದುರಂತಕ್ಕೆ ಕಾರಣ ಗೊತ್ತಾಗಿದ್ದು, ಇದು ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು ಎಂಬುದನ್ನು ಬ್ಲಾಕ್ ಬಾಕ್ಸ್ ಬಹಿರಂಗಮಾಡಿದೆ.

ಸಹ- ಪೈಲಟ್ ಮತ್ತು ಮುಖ್ಯ ಪೈಲಟ್‍ಗಳ ನಡುವಿನ ಜಗಳದಲ್ಲಿ ಯಾವ ತಪ್ಪನ್ನೂ ಮಾಡದ 150 ಮಂದಿ ಸತ್ತಿದ್ದಾರೆ. ಆರಂಭದಲ್ಲಿ ಸಣ್ಣದಿದ್ದ ಜಗಳ, ಬಳಿಕ ದೊಡ್ಡದಾಗಿದೆ. ಮುಖ್ಯಪೈಲಟ್ ಅನ್ನು ಕಾಕ್‍ಪಿಟ್‍ನಿಂದ ಹೊರಹಾಕಿದ ಸಹ ಪೈಲಟ್ ವಿಮಾನವನ್ನು ಪರ್ವತಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಅದೂ 700 ಕಿ.ಮೀ. ವೇಗದಲ್ಲಿ. ಇದರ ಜತೆಗೆ ಬ್ಲಾಕ್ಸ್‍ಬಾಕ್ಸ್‍ನಲ್ಲಿ ಕೊನೆಯ ಹತ್ತು ನಿಮಿಷಗಳ ಕಾಲ ನಡೆದ ಅವರಿಬ್ಬರ ನಡುವಿನ ವಾಕ್ಸಮರದ ಧ್ವನಿಮುದ್ರಣವೂ ಸಿಕ್ಕಿರುವುದು ಸಹಪೈಲಟ್‍ನ ಹೊಣೆಗೇಡಿತನಕ್ಕೆ ಇಂಬು ಕೊಟ್ಟಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಬ್ರಿಸ್ ರಾಬಿನ್ ಗುರುವಾರ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಆತನಿಗೆ ವಿಮಾನವನ್ನು ನಾಶ ಮಾಡುವುದೇ ಉದ್ದೇಶವಾಗಿತ್ತು ಎಂದು ರಾಬಿನ್ ತಿಳಿಸಿದ್ದಾರೆ.

ಕಾಕ್ ಪೀಟ್ ನಲ್ಲಿ ಕಾಳಗ
ಕ್ಯಾಪ್ಟನ್‍ನನ್ನು ಕಾಕ್‍ಪಿಟ್‍ನಿಂದ ಹೊರ ಹಾಕುವುದಕ್ಕಿಂತ ಮೊದಲು ಅವರಿಬ್ಬರ ನಡುವೆ ಮುಷ್ಟಿ ಕಾಳಗ ನಡೆದಿತ್ತು. ಒಂದು ಹಂತದಲ್ಲಿ ಸಹ ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್ ಕ್ಯಾಪ್ಟನ್‍ನತ್ತ ಕುರ್ಚಿಯನ್ನು ಎಸೆದಿದ್ದ ಎಂಬ ಅಂಶ ಬಯಲಾಗಿದೆ.

ಕೊನೆಯ ಹಂತದಲ್ಲಿ
ಇಷ್ಟೆಲ್ಲ ಆಗಿದ್ದರೂ ಪ್ರಯಾಣಿಕರಿಗೆ ವಿಮಾನದಲ್ಲಿ ಆಗಬಾರದ್ದು ಏನೋ ನಡೆಯುತ್ತಿದೆ ಎಂಬ ವಿಚಾರ ಗೊತ್ತಾಗಿದ್ದು ಕೊನೆಯ ಹಂತದಲ್ಲಿ. ಸಹ ಪೈಲಟ್‍ನ ಕೈಗೆ ವಿಮಾನದ ನಿಯಂತ್ರಣ ಬರುತ್ತಿದ್ದಂತೆ ಅದು ಹೊಯ್ದಾಡಲು ಆರಂಭವಾಯಿತು. 38 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ 5 ಸಾವಿರ ಅಡಿಗಳಿಗೆ ತಗ್ಗಿ, ಆಲ್ಪ್ಸ್ ಪರ್ವತ ಶ್ರೇಣಿಗಳಿಗೆ ಅಪ್ಪಳಿಸಿತು. ಇದೇ ವೇಳೆಯಲ್ಲೇ ಏರ್ ಟ್ರಾಫಿಕ್ ನಿಯಂತ್ರಣ ಕೊಠಡಿಗೆ ಸಹಾಯ ಕರೆಯೂ ಬಂದಿತ್ತು.

ಇದು ಉಗ್ರ ಕೃತ್ಯ ಅಲ್ಲ
ಕ್ಯಾಪ್ಟನ್ ಮೇಲಿನ ಸಿಟ್ಟಿನಿಂದ ಸಹ ಪೈಲಟ್ ಈ ಕೃತ್ಯ ಎಸಗಿದ್ದಾನೆ. ಆತನಿಗೆ ವಿಧ್ವಂಸ ಕೃತ್ಯ ಮತ್ತು ಉಗ್ರಗಾಮಿ ಕೃತ್ಯದಲ್ಲಿ ನಂಬಿಕೆ ಇರಲಿಲ್ಲ ಎಂದು ರಾಬಿನ್ ತಿಳಿಸಿದ್ದಾರೆ. ಇದಕ್ಕಾಗಿಯೇ ಸಹ ಪೈಲಟ್ ವಿಮಾನವನ್ನು ಅತಿ ವೇಗದಿಂದ ಚಲಿಸುವಂತೆ ಮಾಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com