ಸಲ್ಮಾನ್ ಖಾನ್ ಪ್ರಕರಣ ಮುಚ್ಚಿ ಹಾಕಲು "ಮಹಾ" ಯತ್ನ..?

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ನಿಂದ ಅಪರಾಧಿ ಎಂದು ಸಾಬೀತಾಗಿ 5 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಅವರನ್ನು ಪ್ರಕರಣದಿಂದ ತಪ್ಪಿಸಲು...
ಬಾಲಿವುಡ್ ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ಬಾಲಿವುಡ್ ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)

ಮುಂಬೈ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ನಿಂದ ಅಪರಾಧಿ ಎಂದು ಸಾಬೀತಾಗಿ 5 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಅವರನ್ನು ಪ್ರಕರಣದಿಂದ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ.

2002ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಅಮಾಯಕರ ಸಾವಿಗೆ ಕಾರಣವಾಗಿದ್ದ ನಟ ಸಲ್ಮಾನ್ ಖಾನ್ ಪ್ರಕರಣ ಸತತ 13 ವರ್ಷಗಳ ಕಾಲ ವಿಚಾರಣೆಗೊಳಪಟ್ಟು ಕಳೆದ ವಾರವಷ್ಟೇ ಸೆಷನ್ಸ್ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿತ್ತು. ಆದರೆ ಇದೀಗ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ನಟ ಸಲ್ಮಾನ್ ಖಾನ್ ಗೆ ಜಾಮೀನು ನೀಡಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ ನಟ ಸಲ್ಮಾನ್ ಖಾನ್ ವಿರುದ್ಧ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆಯೇ..? ಸಲ್ಲು ರಕ್ಷಣೆಗೆ ಮಹಾರಾಷ್ಟ್ರ ಸರ್ಕಾರವೇ ಯತ್ನಿಸುತ್ತಿದೆಯೇ ಎಂಬ ಅನುಮಾನಗಳು ಮೂಡತೊಡಗಿವೆ.

ಏಕೆಂದರೆ ಸಾಮಾನ್ಯವಾಗಿ ಪ್ರಾಸಿ ಕ್ಯೂಷನ್ ವಿರುದ್ಧ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅಮಾನತು ಮಾಡಿದರೆ ಪ್ರಾಸಿಕ್ಯೂಷನ್ ಅಥವಾ ಸರ್ಕಾರದ ಪರ ವಕೀಲರು ಅದರ ವಿರುದ್ಧ ಮೇಲ್ಮನವಿ ಅಥವಾ ತಮ್ಮ ಆಕ್ಷೇಪಣೆ ಸಲ್ಲಿಸುತ್ತಾರೆ. ಆದರೆ ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಬದಲಾಗಿ ಮಹಾರಾಷ್ಟ್ರ ಸರ್ಕಾರ ಸಲ್ಮಾನ್ ಖಾನ್ ವಿರುದ್ಧ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದೆ. ಇನ್ನು ಪ್ರಕರಣ ಸಂಬಂಧ ವಾದ ಮಾಡುತ್ತಿರುವ ಸರ್ಕಾರಿ ಪರ ವಕೀಲ ಸಂದೀಪ್ ಶಿಂಧೆ ಅವರೇ ಹೇಳುವಂತೆ "ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ತಮಗೆ ಸರ್ಕಾರದಿಂದ ಯಾವುದೇ ರೀತಿಯ ನಿರ್ದೇಶನಗಳು ಬಂದಿಲ್ಲ" ಎಂದು ಹೇಳುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಬಹುಶಃ ಸಲ್ಮಾನ್ ಖಾನ್ ಪ್ರಕರಣವನ್ನು ಮುಚ್ಚಿಹಾಕಲು ಬಾಲಿವುಡ್ ಸೇರಿದಂತೆ ಮಹಾರಾಷ್ಟ್ರ ಸರ್ಕಾರದ ಕೆಲವರ ಯತ್ನಿಸುತ್ತಿದ್ದಾರೆಯೇ ಎಂಬ ಗಾಢ ಅನುಮಾನ ಮೂಡುತ್ತಿದೆ. ಆದರೆ ಒಂದಂತೂ ಸತ್ಯ. ಸಲ್ಮಾನ್ ಖಾನ್ ಪ್ರಕರಣವನ್ನು ಇಡೀ ದೇಶದ ಜನತೆ ಗಮನಿಸುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಅಲ್ಲದೇ ಹೋದರೂ ಬೇರೆ ಯಾರಾದರೂ ಹೈಕೋರ್ಟ್ ನಲ್ಲಿ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com