ಪ್ರಧಾನಿ ಮೋದಿ ಚೀನಾ ಭೇಟಿ: ಗರಿಗೆದರಿದ ನಿರೀಕ್ಷೆಗಳು

ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭಗೊಳ್ಳಲ್ಲಿದ್ದು, ಗಡಿ ಭಧ್ರತೆ ವಿಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ...
ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ
ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭಗೊಳ್ಳಲ್ಲಿದ್ದು, ಗಡಿ ಭಧ್ರತೆ ವಿಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಕುರಿತಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕುವ ನಿರೀಕ್ಷೆಗಳಿವೆ.

ಏಷ್ಯಾ ಖಂಡದ ಎರಡು ಬಲಿಷ್ಠ ರಾಷ್ಟ್ರಗಳೆಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ವಿವಾದ ಮೊದಲಿನಿಂದಲೂ ವಿವಾದದಲ್ಲಿಯೇ ಇದೆ. ಹೀಗಾಗಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಭೇಟಿ ಉಭಯ ದೇಶಗಳ ಪಾಲಿಗೆ ಅತಿ ಪ್ರಮುಖ. ಉಭಯ ನಾಯಕರ ಭೇಟಿ ವೇಳೆ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿದ್ದು, ಪ್ರಮುಖವಾಗಿ ಇಂಡೋ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಲಿದೆ.

ಇನ್ನು ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿರುವ ಚೀನಾ ತನ್ನ ಹೈ-ಟೆಕ್ ಸಾಮಗ್ರಿಗಳನ್ನು ಪ್ರಚಾರ ಮಾಡುವ ಉದ್ದೇಶಹೊಂದಿದೆ. ಅಲ್ಲದೆ ಹೈ ಸ್ಪೀಡ್ ರೈಲಿನಿಂದ ಹಿಡಿದು ಪರಮಾಣು ಸ್ಥಾವರ ನಿರ್ಮಾಣದವರೆಗೂ ತನ್ನ ಕಣ್ಣು ನೆಟ್ಟಿದೆ. ಇನ್ನು ಚೀನಾದಲ್ಲಿರುವ ಆರ್ಥಿಕ ಬಲವನ್ನು ಬಳಸಿಕೊಳ್ಳುವ ಮೂಲಕ ಭಾರತ ತನ್ನ ಉತ್ಪಾದನಾ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಪರಸ್ಪರ ಹೂಡಿಕೆಗೆ ಮುಂದಾಗಿವೆ. ಇದಕ್ಕೆ ಸಂಬಂಧಿಸಿದಂತೆ ಸಂಪರ್ಕ ವರ್ಧಿಸುವ ನಿಟ್ಟಿನಲ್ಲಿ ಗಂಭೀರ ಚರ್ಚೆಗಳು ನಡೆಯಲಿವೆ. ಭಾರತದ 2 ರಾಜ್ಯಗಳಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌ಗಳು ಸ್ಥಾಪನೆಗೊಳ್ಳಲಿದ್ದು, ಚೀನಾವು 2 ಸಾವಿರ

ಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಈ ಹಿಂದೆ ಚೀನಾ ಹೇಳಿತ್ತು. ಈ ಸಂಬಂಧ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಬಂಧಿಸಿದಂತೆ ಕೆಲ ಮಹತ್ವ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದ್ದು, ಯಾತ್ರೆಗೆ ಹೆಚ್ಚುವರಿ ಮಾರ್ಗವನ್ನು ಮುಕ್ತಗೊಳಿಸುವ ಕುರಿತ ಚರ್ಚೆ ಮಹತ್ವ ಪಡೆದಿದೆ.

ಮೋದಿ ಸ್ವಾಗತಕ್ಕೆ ಸಜ್ಜಾದ ಜಿನ್ ಪಿಂಗ್ ಹುಟ್ಟೂರು ಶಾನ್ ಕ್ಸಿ ಗುಜರಾತ್ ಭೇಟಿ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ರಿಗೆ ನೀಡಲಾಗಿದ್ದ ಅದ್ಧೂರಿ ಸ್ವಾಗತದ ಮಾದರಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅದ್ಧೂರಿ ಸ್ವಾಗತ ನೀಡಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಿದ್ಧತೆ ನಡೆಸಿಕೊಂಡಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಜಿನ್ ಪಿಂಗ್ ಅವರ ಹುಟ್ಟೂರಾದ ಶಾನ್ ಕ್ಸಿ ಪ್ರಾಂತ್ಯದಲ್ಲಿ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಭಾರತ ಪ್ರವಾಸದ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಜೂಲಾ ರೈಡ್‍ನಲ್ಲಿ ಸುತ್ತಾಡಿಸಿದ್ದಲ್ಲದೆ, ಸಾಬರಮತಿ ಆಶ್ರಮಕ್ಕೆ ಕರೆದೊಯ್ದು ಚರಕದಿಂದ ನೇಯ್ಗೆಯನ್ನೂ ಮಾಡಿಸಿದ್ದರು. ಇದೇ ಮಾದರಿಯಲ್ಲಿ ಜಿನ್ ಪಿಂಗ್ ಅವರೂ ಕೂಡ ಪ್ರಧಾನಿ ಮೋದಿ ಅವರನ್ನು ವೈಲ್ಡ್ ಗೂಸ್ ಪಗೋಡಾಕ್ಕೆ ಕರೆದೊಯ್ದು ಶತಮಾನಗಳ ಹಿಂದಿನ ಬೌದ್ಧ ಶಾಸನಗಳನ್ನು ತೋರಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಇನ್ನು ಚೀನಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದು, ಮೊದಲಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಂದ ಅವರ ಹುಟ್ಟೂರಾದ ಶಾನ್ ಕ್ಸಿ ಯಲ್ಲಿ ಅದ್ದೂರಿ ಸ್ವಾಗತಪಡೆಯಲಿದ್ದಾರೆ. ಅಲ್ಲಿ ಅವರ ಆತಿಥ್ಯವನ್ನು ಸ್ವೀಕರಿಸಲಿರುವ ಮೋದಿ ಬಳಿಕ ಬೀಜಿಂಗ್‌ ಗೆ ತೆರಳಲಿದ್ದಾರೆ. ಬೀಜಿಂಗ್‌ ನಲ್ಲಿ ವಾಣಿಜ್ಯಾಭಿವೃದ್ಧಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಕೊನೆಗೆ ಶಾಂಘೈ ನಗರಕ್ಕೆ ಆಗಮಿಸಲಿರುವ ಮೋದಿ, ಸಾರ್ವಜನಿಕ ಸಭೆಯಲ್ಲಿ ಚೀನಾದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಳಿಕ ಮಂಗೋಲಿಯಾಗೆ ಪ್ರಯಾಣ ಬೆಳೆಸಲಿರುವ ಮೋದಿ, ಮೇ 17ರಂದು ಮಂಗೋಲಿಯ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಂಗೋಲಿಯ ಪ್ರವಾಸದ ಬಳಿಕ
ಕೊನೆಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ಪಾರ್ಕ್‌ ಗಿನ್‌ ಹೆ ಜೊತೆ ಮಾತುಕತೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com