ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಜಿಹಾದಿ ಚಳವಳಿ ನಡೆಸಲು ಉಗ್ರ ಒಸಾಮ ಬಿನ್ ಲಾಡೆನ್‍ಗೆ `ಭಾರತೀಯ ಸಹೋದರ'ನೂ ನೆರವಾಗಿದ್ದನು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಅಲ್‍ಖೈದಾ ಸ್ಥಾಪಕ ಲಾಡೆನ್‍ನನ್ನು ಹತ್ಯೆಗೈದ ಅಬೋಟಾಬಾದ್‍ನ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ಅಂಶವೂ ಸೇರಿದೆ. ಅಮೆರಿಕವು ಗುರುವಾರ ಬಿಡುಗಡೆ ಮಾಡಿದ ಈ ದಾಖಲೆಯಲ್ಲಿ, ಭಾರತೀಯನೊಬ್ಬ ಲಾಡೆನ್‍ಗೆ ಹಣಕಾಸು ನೆರವು ನೀಡಿರುವ ಬಗ್ಗೆ ಪ್ರಸ್ತಾಪವಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಲಾಡೆನ್‍ಗೆ ಭಾರತೀಯನ ಸಂಪರ್ಕವಿದ್ದ ವಿಚಾರ ಬಯಲಾದಂತಾಗಿದೆ.
ಭಾರತೀಯನಿಗೂ ನಂಟು
ಒಬ್ಬ ವ್ಯಕ್ತಿಯಿಂದ ಲಾಡೆನ್‍ಗೆ ಹಲವು ಬಾರಿ ಹಣಕಾಸು ನೆರವು ಹರಿದುಬಂದಿತ್ತು. ಈ ವ್ಯಕ್ತಿಯನ್ನು ಲಾಡೆನ್ `ಮದೀನಾದಲ್ಲಿರುವ ಭಾರತೀಯ ಸಹೋದರ' ಎಂದೇ ಪ್ರಸ್ತಾಪಿಸಿದ್ದಾನೆ. `ಮೊದಲಿಗೆ 2008ರ ಮೇ ತಿಂಗಳಲ್ಲಿ ಭಾರತೀಯ ಸಹೋದರ ರು.2,92,400 ಅನ್ನು ಅಲ್‍ಖೈದಾಗೆ ಕಳುಹಿಸಿದ್ದ. ನಂತರ 2009ರ ಜುಲೈನಲ್ಲಿ ರು.3,35,000 ಜಮೆ ಮಾಡಿದ್ದ. ಈ ಪೈಕಿ ರು.5 ಸಾವಿರವನ್ನು ಸಂದೇಶವಾಹಕನೊಬ್ಬನಿಗೆ ಟಿಪ್ ಕೊಟ್ಟಿದ್ದೆ' ಎಂದು ಸ್ವತಃ ಲಾಡೆನ್ ಹೇಳಿಕೊಂಡಿದ್ದಾನೆ. ಈವರೆಗೆ ಅಲ್‍ಖೈದಾಗೆ ಆರ್ಥಿಕ ನೆರವು ನೀಡಿದ್ದರಲ್ಲಿ ಯಾವೊಬ್ಬ ಭಾರತೀಯನ ಹೆಸರೂ ಕೇಳಿಬಂದಿರಲಿಲ್ಲ. ಆದರೆ, ಭಾರತೀಯ ಮಹಿಳೆಯ ಪುತ್ರನಾದ ಸೌದಿ ಪ್ರಜೆ ಮಹ್ಮೂದ್ ಮುಹಮ್ಮದ್ ಬಹಾಜಿಕ್ ಎಂಬಾತನಿಗೆ ಖೈದಾ ಹಾಗೂ ಲಷ್ಕರ್ ಜತೆ ಸಂಪರ್ಕವಿತ್ತು ಎಂದು 2005ರಲ್ಲಿ ಅಮೆರಿಕ ಆರೋಪಿಸಿತ್ತು. 2006ರಲ್ಲಿ ಭಯೋತ್ಪಾದಕರಿಗೆ ಹಣ ರವಾನೆ ಆರೋಪದಲ್ಲಿ ಈತನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು. ಆದರೆ, ನಂತರ ಆತನ ವಿಚಾರಣೆ ಬಗ್ಗೆಯಾಗಲೀ, ಸ್ಥಿತಿಗತಿ ಬಗ್ಗೆಯಾಗಲೀ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಮಹಿಳೆಯರಿಂದಲೂ ಹಣ
`ಇಂಡಿಯನ್ ಬ್ರದರ್' ರೀತಿಯಲ್ಲೇ ಹಲವ ರಿಂದ ಲಾಡೆನ್‍ಗೆ ಹಣ ಹರಿದು ಬರುತ್ತಿತ್ತು. ಈ ಪೈಕಿ ಕೆಲವರು ಐಎಸ್‍ಐ ಜತೆ ಸಂಪರ್ಕವನ್ನೂ ಹೊಂದಿದ್ದರು. ಖೈದಾ ಬಗ್ಗೆ ಸಹಾನೂಭೂತಿ ಹೊಂದಿದ್ದ ಅನೇಕರು ಹಣ ಕಳುಹಿಸುತ್ತಿದ್ದರು. ಕೆಲವು ಮಹಿಳೆಯರಂತೂ ತಮ್ಮ ಆಭರಣಗಳನ್ನು ಮಾರಾಟ ಮಾಡಿ ಹಣಕಾಸು ನೆರವು ನೀಡಿದ್ದರು ಎಂಬ ವಿಚಾರವನ್ನೂ ಡೈರಿಯಲ್ಲಿ ಉಲ್ಲೇಖಿಸಲಾಗಿದೆ.
ಒಸಾಮನ ಲೆಫ್ಟಿನೆಂಟ್‍ಗಳು 2011ರ ಏ.5 ರಂದು ತಮ್ಮ ನಾಯಕನಿಗೆ ಪತ್ರ ವೊಂದನ್ನು ಬರೆದಿದ್ದರು. ``ಹಲವಾರು ಜಿಹಾದಿ ಸಂಘ ಟನೆಗಳಿಗೆ ಬೆಂಬಲವಾಗಿ ನಿಂತು ಅನೇಕರು ಹಣ ಕಳುಹಿಸುತ್ತಿದ್ದಾರೆ. ಹೀಗಾಗಿ ವೆಚ್ಚ ಭರಿಸುವುದು ಕಷ್ಟವಾಗುತ್ತಿಲ್ಲ. ನಮಗೀಗ ಹೆಚ್ಚು ಸಾಲವೂ ಇಲ್ಲ. ಜತೆಗೆ, ಸಂಭಾವ್ಯ ಯುದ್ಧಕ್ಕೆ ಬೇಕಾದ ಎಲ್ಲ ಶಸ್ತ್ರಾಸ್ತ್ರಗಳು, ಸಲಕರಣೆಗಳನ್ನು ಖರೀದಿಸಿ
ದ್ದೇವೆ'' ಎಂದು ಪತ್ರದಲ್ಲಿ ತಿಳಿಸಿದ್ದರು.
ಮತ್ತೊಂದು ಮದುವೆಯಾಗು..!
ಏತನ್ಮಧ್ಯೆ, ವಿಡಿಯೋವೊಂದರಲ್ಲಿ ಲಾಡೆನ್ ತನ್ನ ಪತ್ನಿಯರ ಪೈಕಿ ಒಬ್ಬಳನ್ನು ಉದ್ದೇಶಿಸಿ ಮಾತನಾಡಿದ್ದಾನೆ. `ಈ ಜಗತ್ತಲ್ಲಿ ನನಗೆ ಸಿಕ್ಕಿದ ಅತ್ಯಂತ ಅಮೂಲ್ಯವಾದವುಗಳಲ್ಲಿ ನೀನೂ ಒಬ್ಬಳು. ನಾನು ಸತ್ತ ಬಳಿಕ ನೀನು ಮತ್ತೊಂದು ಮದುವೆಯಾಗುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಸ್ವರ್ಗದಲ್ಲೂ ನೀನೇ ನನಗೆ ಪತ್ನಿಯಾಗಿ ಮುಂದುವರಿಯಬೇಕೆಂದು ಬಯಸುತ್ತೇನೆ' ಎಂದಿದ್ದಾನೆ ಲಾಡೆನ್.
ಇನ್ನೇನು ತೆರಳುವವನಿದ್ದ
ಅಬೋಟಾಬಾದ್‍ನ ಮನೆಯಲ್ಲಿ ಏಕಾಂಗಿಯಾಗಿದ್ದು ರೋಸಿಹೋಗಿದ್ದ ಲಾಡೆನ್, ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದ. ಆತನಿಗೆ ಅಲ್ಲಿ ಆಶ್ರಯ ಕಲ್ಪಿಸಿದ್ದ ಇಬ್ಬರು ಪಾಕಿಸ್ತಾನೀಯರ ಬಗ್ಗೆ ಪ್ರಸ್ತಾಪಿಸಿ ಪತ್ನಿ ಖೈರಿಯಾಗೆ ಪತ್ರ ಬರೆದಿದ್ದ ಲಾಡೆನ್, `ನನಗೆ ಅವರನ್ನು ಬಿಟ್ಟು ಹೋಗಬೇಕು ಎಂದು ಅನಿಸುತ್ತಿದೆ. ಆದರೆ ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು. ನಂತರ ನೀನು, ಹಂಝ ಮತ್ತು ಅವನ ಪತ್ನಿ ನಾನಿರುವಲ್ಲಿಗೆ ಬರಬಹುದು. ಅಲ್ಲಿಯವರೆಗೆ ನಾನು ನಿನ್ನ ಕ್ಷಮೆ ಯÁಚಿಸುತ್ತೇನೆ. ನಿನಗೆ ಇಲ್ಲಿನ ಸ್ಥಿತಿ ಅರ್ಥವಾಗುತ್ತದಲ್ಲವೇ? ನಾವು ಮತ್ತೆ ಒಂದಾಗುವಂತೆ ದೇವರಲ್ಲಿ ಪ್ರಾರ್ಥಿಸು' ಎಂದಿದ್ದ.
ಮಕ್ಕಳ ಬಗ್ಗೆ ಕೇಳಿದ್ದ
ಉಗ್ರ ಒಸಾಮ ಲಾಡೆನ್ ತನ್ನ ನಾಲ್ವರು ಪತ್ನಿಯರು, 20 ಮಕ್ಕಳು ಮತ್ತು ಸಂಬಂ„ಕರ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದ. ಜತೆಗೆ, ಅವರಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆಯನ್ನೂ ನೀಡಿದ್ದ. ಪುತ್ರಿ ಉಮ್ಮಾ ಮುವಾದ್‍ಗೆ ಪತ್ರ ಬರೆದಿದ್ದ ಲಾಡೆನ್, `ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿ ದ್ದೇನೆ' ಎಂದಿದ್ದ. ಅಲ್ಲದೆ, ಪುತ್ರನ ಕಲಿಕೆ ಬಗ್ಗೆಯೂ ಪ್ರಶ್ನಿಸಿದ್ದ. ಹೆಣ್ಣು ಮಕ್ಕಳು ದೊಡ್ಡವರಾದ ಬಳಿಕ ಕೆಟ್ಟವರ ಸಂಗ ಮಾಡದಂತೆ ಎಚ್ಚರವಹಿಸುವಂತೆ ಪತ್ನಿಗೆ ತಿಳಿಸಿದ್ದ. ಜತೆಗೆ, `ಅವರನ್ನು ಮುಜಾಹಿದೀನ್‍ರೊಂದಿಗೆ ಮದುವೆ ಮಾಡಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಯಾರಾದರೂ ಒಳ್ಳೆಯ ಹುಡುಗರನ್ನು ನೋಡಿ ಮದುವೆ ಮಾಡಿಸು' ಎಂದು ಸೂಚಿಸಿದ್ದ.
ಅಮೆರಿಕನ್ನರನ್ನು ಕೊಲ್ಲಿ
``ದೇವರ ಹೆಸರಲ್ಲಿ ಅಮೆರಿಕನ್ನರು, ಯುರೋಪಿಯನ್ನರು ಮತ್ತು ಯಹೂದಿಯನ್ನರನ್ನು ಕೊಂದು ಬಿಡಿ. ಅಮೆರಿಕವೆಂಬ ಅಸಹ್ಯಕರ ಮರವನ್ನೇ ನೆಲಕ್ಕುರುಳಿಸಿ. ನಿಮ್ಮ ನಿಮ್ಮೊಳಗೆ ಕಚ್ಚಾಡಿಕೊಳ್ಳಬೇಡಿ'' ಎಂದು ಲಾಡೆನ್ ತನ್ನ ಸಹವರ್ತಿಗಳಿಗೆ ಕರೆ ನೀಡಿದ್ದ.
Advertisement