
ಮಥುರಾ: ಅಧಿಕಾರದ ಹೆಸರಲ್ಲಿ ದೇಶವನ್ನು ಲೂಟಿ ಮಾಡಿದವರಿಗೆ ಇನ್ನು ಮುಂದೆ ಕೆಟ್ಟ ದಿನ ಕಾದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಮಥುರಾದ ಪಂಡಿತ್ ದೀನ್ ದಯಾಳ್ ಅವರ ಹುಟ್ಟೂರಾದ ನಾಗ್ಲಾ ಚಂದ್ರಭಾನ್ ನಲ್ಲಿ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೃಹತ್ ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರ ನಂಬಿಕೆಗೆ ನಾನು ಎಂದಿಗೂ ದ್ರೋಹ ಮಾಡಲು ಸಾಧ್ಯವಿಲ್ಲ. ನನ್ನ ಜೀವನದ ಪ್ರತಿ ಕ್ಷಣಗಳು ದೇಶದ ಜನತೆಗೆ
ಅರ್ಪಿತವಾಗಿವೆ. ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿದ್ದು, ದೇಶವನ್ನು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿಡಲು ಸಕಲ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ದೇಶವನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಶ್ವದ ದೃಷ್ಟಿಯಲ್ಲಿ ನಮ್ಮ ದೇಶವನ್ನು ಉನ್ನತ ಸ್ಥಾಯಿಗೆ ಕರೆದೊಯ್ಯಬೇಕು ಎನ್ನುವುದು ನಮ್ಮ ಅಭಿಲಾಶೆಯಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದ್ದು, ಕಳೆದ ಒಂದು ವರ್ಷದಲ್ಲಿ ನಮ್ಮ ಸರ್ಕಾರ ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಯಾವುದೇ ಪಕ್ಷಪಾತ ನಡೆಸದೇ ಆಡಳಿತ ನಡೆಸಿದ್ದೇವೆ. ನಾನು ದೇಶದ ಜನರಿಗೆ ನೀಡಿದ್ದ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ. ಭಾರತದ ರಾಜಕಾರಣ ಮಹಾತ್ಮ ಗಾಂಧಿ, ರಾಮ್ ಮನೋಹರ್ ಲೋಹಿಯಾ ಹಾಗೂ ಪಂಡಿತ್ ದೀನ್ ದಯಾಳ್ ಅವರ ಚಿಂತನೆಯಿಂದ ಪ್ರಭಾವಿತವಾಗಿದೆ.
ನನ್ನ ಸರ್ಕಾರ ಬಡವರಿಗಾಗಿ ಸಮರ್ಪಿತವಾಗಿದೆ. ನಾವು ಬಡವರ ಏಳಿಗಾಗಿ ದುಡಿಯುತ್ತಿದ್ದೇವೆ. ನಮ್ಮ ಸರ್ಕಾರ ಒಂದು ವರ್ಷದಲ್ಲಿ ಸಾಧನೆಯನ್ನು ಇಲ್ಲಿಂದಲೇ ಪ್ರಚಾರಪಡಿಸುತ್ತೇನೆ. ನಮ್ಮದು ಬಡವರ ಪರವಾದ ಸರ್ಕಾರವಾಗಿದ್ದು, ಈ ಎಲ್ಲಾ ಬದಲಾವಣೆ ತಂದಿದ್ದು ನಾನಲ್ಲ, ಈ ಬದಲಾವಣೆಯ ಹರಿಕಾರರು ನೀವು, ಈ ದೇಶದ ಜನರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯುಪಿಎ ಸರ್ಕಾರದಿಂದ ದೇಶದ ಲೂಟಿ
ಇದೇ ವೇಳೆ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಅವರು, ಹಗರಣಗಳಿಂದಾಗಿ ಈ ದೇಶದ ಜನತೆ ಪ್ರತಿದಿನ ತಲೆತಗ್ಗಿಸುವಂತಾಗಿತ್ತು. ಹಿಂದಿನ ಯುಪಿಎ ಸರ್ಕಾರ ದೇಶವನ್ನು ಲೂಟಿ ಮಾಡಿದ್ದು, ಕಲ್ಲಿದ್ದಲು ಹಗರಣ, ಸ್ಪ್ರೆಕ್ಟ್ರಂ ಸೇರಿದಂತೆ ಹಲವಾರು ಹಗರಣಗಳಿಂದಾಗಿ ದೇಶದ ಘನತೆಗೆ ಕುಂದು ಬಂದಿತ್ತು. ಕಾಂಗ್ರೆಸಿಗರು 60 ವರ್ಷಗಳ ಕಾಲ ದೇಶಾದ್ಯಂತ ಅರಚಾಡುತ್ತಿದ್ದರು.
ಅವರಿಗೆ ಕೆಟ್ಟ ದಿನಗಳು ಬರುವುದು ಸಾಮಾನ್ಯವಾಗಿತ್ತು. ನಾನು ನಿಮ್ಮ ಪ್ರಧಾನ ಸೇವಕಾನಾಗಿದ್ದೇನೆ. ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ, ಪಕ್ಷಪಾತಕ್ಕೆ ಅವಕಾಶವಿಲ್ಲ. ನಾನು ಕಾಂಗ್ರೆಸ್ ಸರ್ಕಾರದ ಲೂಟಿಯನ್ನು ತಡೆದಿದ್ದೇನೆ. ನಮ್ಮ ಸರ್ಕಾರ ಕೆಟ್ಟದ್ದರಿಂದ ಮುಕ್ತಿ ಪಡೆಯುವ ಕೆಲಸ ಮಾಡಿದೆ.. ಯಾರು ದೇಶವನ್ನು ಲೂಟಿ ಮಾಡಿದ್ದಾರೋ ಅವರಿಗೆ ಮುಂದೆ ಕೆಟ್ಟ ದಿನಗಳು ಕಾದಿದೆ ಎಂದು ಮೋದಿ ಈ ಸಂದರ್ಭದಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
Advertisement