
ಲಂಡನ್: ಬ್ರಿಟನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಂಡನ್ ಗೆ ಆಗಮಿಸಿದ್ದು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಹೂಡಿಕೆ, ರಕ್ಷಣಾ ಸಹಕಾರ ಸೇರಿದಂತೆ ಹಲವು ದ್ವಿಪಕ್ಷೀಯ ಮಾತುಕತೆ ಸಂಬಂಧ ಬ್ರಿಟನ್ ಪ್ರವಾಸ ಕೈಗೊಂಡಿರುವ ಮೋದಿ ಅವರು, ಇಂದು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಅವರ ಭೇಟಿ ಮಡಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಉಭಯ ನಾಯಕರು ಮಾತನಾಡಲಿದ್ದಾರೆ.
ಮೋದಿಯವರು ನಾಳೆ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೇ ನವೆಂಬರ್ 14ರಂದು ಬ್ರಿಟನ್ ಸಂಸತ್ ಮುಂಭಾಗದಲ್ಲಿ ಸ್ಥಾಪಿಸಿರುವ ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಬ್ರಿಟನ್ ಗೆ ತೆರಳುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಭೇಟಿಯಿಂದ ಭಾರತ ಮತ್ತು ಬ್ರಿಟನ್ ನಡುವಿನ ಆರ್ಥಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಭಾರತಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
Advertisement