
ಬೆಂಗಳೂರು: ರೈತರಿಗೆ ಕಿರುಕುಳ ನೀಡುತ್ತಿದ್ದ 1,350 ಲೇವಾದೇವಿದಾರರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೆಂಟ್ರಲ್ ಕಾಲೇಜಿನಲ್ಲಿ ಸಹಕಾರ ಇಲಾಖೆ ಬುಧವಾರ ಆಯೋಜಿಸಿದ್ದ `ಸಹಕಾರ ಮಾರುಕಟ್ಟೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ದಿನ ಹಾಗೂ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಸುವರ್ಣ ಮಹೋತ್ಸವ' ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಲಬಾಧೆಯಿಂದ ರಾಜ್ಯದಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹಕಾರಿ ಸಂಸ್ಥೆಗಳು ಹಾಗೂ ಸಹಕಾರಿ ಕ್ಷೇತ್ರದಲ್ಲಿರುವ ಮುಖಂಡರು ರೈತರಿಗೆ ಆತ್ಮವಿಶ್ವಾಸ ತುಂಬಿ ಆತ್ಮಹತ್ಯೆಗಳಾಗದಂತೆ ಎಚ್ಚರ ವಹಿಸಬೇಕು. ಗ್ರಾಮಗಳಲ್ಲಿ ಖಾಸಗಿ ಲೇವಾದೇವಿಗಾರರು ರೈತರಿಗೆ ಸಾಲ ನೀಡುತ್ತಿದ್ದಾರೆ. ರೈತರ ಬಳಿ ಕಾನೂನುಬಾಹಿರವಾಗಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈವರೆಗೆ 1,350 ಲೇವಾದೇವಿಗಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, 600 ಮಂದಿಯನ್ನು ಬಂಧಿಸಲಾಗಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಸೇರಿದಂತೆ ಏಳು ಮಂದಿಗೆ `ಸಹಕಾರ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಮಹಾಮಂಡಲದ ಅಧ್ಯಕ್ಷ ಶೇಖರ್‍ಗೌಡ ಮಾಲಿ ಪಾಟೀಲ್, ಶಾಸಕ ಎಸ್.ಟಿ.ಸೋಮಶೇಖರ್ ಹಾಜರಿದ್ದರು.
Advertisement