
ವಿಧಾನಪರಿಷತ್ತು: ಕೆಟ್ಟು ನಿಂತ ಬ್ಯಾಗೇಜ್ ಸ್ಕ್ಯಾನರ್‍ಗಳು, ಕೆಲಸ ಮಾಡದ ಲೋಹಶೋಧಕ ಯಂತ್ರಗಳು... ಇದು ವಿಧಾನಸೌಧದ ಭದ್ರತೆಯ ಕತೆ.
ಮೇಲ್ಮನೆಯ ಪ್ರತಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ತಾವು ಖುದ್ದಾಗಿ ಬೆಳಿಗ್ಗೆ ಪರಿಶೀಲನೆ ನಡೆಸಿ ಬಂದಿದ್ದು, ಸ್ಕ್ಯಾನರ್‍ಗಳು, ಮೆಟಲ್ ಡಿಟೆಕ್ಟರ್‍ಗಳು ಕೆಲಸ ಮಾಡುತ್ತಿಲ್ಲ. ಹೀಗಾದರೇ ರಕ್ಷಣೆ ಒದಗಿಸಲು ಹೇಗೆ. ಇದು ಆಘಾತಕಾರಿ ಸಂಗತಿ ಎಂದು ವಿವರಿಸಿದರು.
ಜೊತೆಗೆ ಅನೇಕ ತಿಂಗಳು, ವರ್ಷದಿಂದಲೇ ಈ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಸೂಕ್ತ ತನಿಖೆ ನಡೆಸಿ ಭದ್ರತೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಮತ್ತು ಲೋಪಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, 2007-08ರಲ್ಲಿ 4 ಸ್ಕ್ಯಾನರ್, 9 ಡೋರ್ ಮೆಟಲ್ ಡಿಟೆಕ್ಟರ್‍ಗಳನ್ನು, 26 ಹ್ಯಾಂಡ್ ಹೋಲ್ಡ್ ಮೆಟಲ್ ಡಿಟೆಕ್ಟರ್‍ಗಳನ್ನು ಬಳಸಲಾಗುತ್ತಿದೆ. ಈ ಪೈಕಿ ವಿಕಾಸಸೌಧ ಮತ್ತು ವಿಧಾನಸೌಧದಲ್ಲಿರುವ ಕೆಲವು ಸ್ಕ್ಯಾನರ್, ಡಿಟೆಕ್ಟರ್‍ಗಳು ಕೆಲಸ ಮಾಡುತ್ತಿಲ್ಲ. 5 ಕೋಟಿ ರು. ವೆಚ್ಚದಲ್ಲಿ ಭದ್ರತಾ ವ್ಯವಸ್ಥೆ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಆಗ ಮಾತನಾಡಿದ ಗಣೇಶ್ ಕಾರ್ಣಿಕ್, ವಿಧಾನಸೌಧಕ್ಕೆ ಬಂದ ಸಿಖ್ ವ್ಯಕ್ತಿಯೊಬ್ಬರು ಕೃಪಾಣವನ್ನು ತಮ್ಮೊಂದಿಗೆ ಒಳಗೆ ತಂದುಬಿಟ್ಟಿದ್ದರು. ನಂತರ ಹೈ ಸೆಕ್ಯುರಿಟಿ ಪ್ರದೇಶವೆಂದು ಗೊತ್ತಾಗಿ ವಾಪಸು ಕೊಟ್ಟು ಬಂದರು, ಆಗಲೇ ಅಲ್ಲಿನ ಪರಿಸ್ಥಿತಿ ಅರ್ಥವಾಯಿತು. ತಕ್ಷಣವೇ ತಾವು ಎಲ್ಲೆಡೆ ಪರಿಶೀಲನೆ ಮಾಡಿಬಂದಿದ್ದು ಭದ್ರತೆಯಲ್ಲಿ ಲೋಪವಿದೆ ಎಂದರು.
Advertisement