ಅಡಿ ಪದಚ್ಯುತಿ ಪ್ರಸ್ತಾಪ ಮಂಡನೆ, ಮತಕ್ಕೆ ಹಾಕಲು ಸ್ಪೀಕರ್ ನಕಾರ

ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರ ಪದಚ್ಯುತಿ ಪ್ರಸ್ತಾಪವನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸ್ಪೀಕರ್ ಕಾಗೋಡು ತಿಮ್ಮಪ್ಪ
ಸ್ಪೀಕರ್ ಕಾಗೋಡು ತಿಮ್ಮಪ್ಪ

ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರ ಪದಚ್ಯುತಿ ಪ್ರಸ್ತಾಪವನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಆದರೆ ಪ್ರತಿಪಕ್ಷ ಬಿಜೆಪಿ ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲ ನಡೆಸಿದರು.

ಬಿಜೆಪಿ ಶಾಸಕರ ವಿರೋಧದ ನಡುವೆಯೇ ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಅವರು ಇಂದು ವಿಧಾನಸಭೆಯಲ್ಲಿ ಅಡಿ ಪದಚ್ಯುತಿ ಪ್ರಸ್ತಾಪವನ್ನು ಮಂಡಿಸಿದರು. ಬಳಿಕ ಇದನ್ನು ಮತಕ್ಕೆ ಹಾಕುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಆದರೆ ಮತಕ್ಕೆ ಹಾಕಲು ಸ್ಪೀಕರ್ ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಶೆಟ್ಟರ್ ಪ್ರಸ್ತಾವನೆಯ ಹಾಳೆ ಹರಿದುಹಾಕಿ ಸದನದಿಂದ ಹೊರ ನಡೆದರು.

ನಂತರ ವಿಧಾನಸಭೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್, ವಿಧಾನಸಭೆಯಲ್ಲಿ ನಮ್ಮ ಮನವಿಗಳಿಗೆ ಪುರಸ್ಕಾರ ಸಿಗುತ್ತಿಲ್ಲ. ಚರ್ಚೆ ಇಲ್ಲದೆ ಪೂರಕ ಅಂದಾಜು ಅಂಗೀಕರಿಸಲಾಗಿದೆ. ಅಲ್ಲದೆ ಇದು ಉಪ ಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದ್ದೆ. ಅದನ್ನೂ ಸ್ಪೀಕರ್ ತಿರಸ್ಕರಿಸಿದರು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಉಪ ಲೋಕಾಯುಕ್ತ ಪದಚ್ಯುತಿ ಸಂಬಂಧ ಕಾಂಗ್ರೆಸ್ ಸಲ್ಲಿಸಿರುವ ಪ್ರಸ್ತಾವದ ಬಗ್ಗೆ ಸ್ಪೀಕರ್ ಕಡತ ಪರಿಶೀಲನೆ ನಡೆಸಿದ್ದು, ಇನ್ನೊಂದು ವಾರದಲ್ಲಿ ಪ್ರಸ್ತಾಪವನ್ನು ಹೈಕೋರ್ಟ್  ಮುಖ್ಯನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com