
ಮುಂಬೈ: ಶಿವಸೇನೆ ವಿರೋಧದ ನಡುವೆಯೂ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಅವರ 'ನೈದರ್ ಎ ಹಾಕ್ ನಾರ್ ಎ ಡವ್' ಪುಸ್ತಕವನ್ನು ಸೋಮವಾರ ಸಂಜೆ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರ ಮಾಜಿ ಆಪ್ತ ಸುಧೀಂದ್ರ ಕುಲಕರ್ಣಿ ಅವರು, ಕಾರ್ಯಕ್ರಮ ವಿರೋಧಿ ತಮ್ಮ ಮುಖಕ್ಕೆ ಮಸಿ ಬಳೆದಿದ್ದ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ-ಪಾಕ್ ಗಡಿಯಲ್ಲಿನ ಜನ ಶಾಂತಿ ಬಯಸುತ್ತಾರೆ. ಭೂತಕಾಲದ ತಪ್ಪುಗಳನ್ನು ಅಳಿಸುವುದು ಮತ್ತು ಭೇಧಭಾವದ ಹುಳುಕು ತೆಗೆದು ಹಾಕುವುದು ನಮ್ಮ ಕರ್ತವ್ಯವಾಗಿದ್ದು, ಇಂದಿನ ಕಾರ್ಯಕ್ರಮ ಫಲಪ್ರದವಾಗಿದೆ ಎಂದರು.
ಮಹಮ್ಮದ್ ಕಸೂರಿ ಮನೆತನ ಭಾರತೀಯ ಬೇರಿನಲ್ಲಿದೆ. ಅವರ ತಂದೆ ಕ್ವಿಟ್ ಇಂಡಿಯಾ ಚಳುವಳಿಯ ವೇಳೆ ಸೆರೆಯಾಗಿದ್ದರು ಎಂದರು. ಅಲ್ಲದೆ ಮುಂಬೈ ಈಗ ಭಾರತದ ನಗರವಲ್ಲ. ಅಂತಾರಾಷ್ಟ್ರೀಯ ನಗರ ಮತ್ತು ಮಹಾತ್ಮ ಗಾಂಧಿ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಅವರ ಕರ್ಮಭೂಮಿ ಎಂದರು.
ಇನ್ನು ಈ ವೇಳೆ ಮಾತನಾಡಿದ ಕಸೂರಿ, ಅಭೂತಪೂರ್ವ ರಕ್ಷೆಣೆ ನೀಡಿದ್ದಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ನಾಸಿರುದ್ದೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಿವಸೇನೆ ವಿರೋಧದ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದ ನೆಹರು ಕೇಂದ್ರದ ಸುತ್ತ ಭಾರಿ ಮೂರು ಸುತ್ತಿನ ಭದ್ರತೆ ಕೈಗೊಳ್ಳಲಾಗಿತ್ತು.
Advertisement