
ಗೌಹಾಟಿ: ದೇಶದಲ್ಲಿ ಹೆಚ್ಚಿತ್ತಿರುವ ಕೋಮು ಘರ್ಷಣೆ, ಅಸಹನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಲೇಖಕರ ಪಟ್ಟಿಗೆ ಅಸ್ಸಾಮಿನ ಲೇಖಕ ಮತ್ತು ಪತ್ರಕರ್ತ ಹಾಮೆನ್ ಬಾರ್ಗೋಹೇನ್ ಸೇರ್ಪಡೆಯಾಗಿದ್ದು ಅವರು ಕೂಡ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ.
ಅಸ್ಸಾಮಿನ ಪ್ರಾದೇಶಿಕ ಪತ್ರಿಕೆಯಲ್ಲಿ ಬರೆದು ಈ ವಿಷಯ ತಿಳಿಸಿರುವ ಬಾರ್ಗೋಹೇನ್ "ದಾಧ್ರಿ ಘಟನೆ ನಡೆದಾಗಿಲಿಂದಲೂ ನನ್ನೊಳಗೆ ಮೌನ ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ತಿಳಿಯಲಿಲ್ಲ.
"ಈಗ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಒಬ್ಬರ ನಂತರ ಒಬ್ಬರು ಕನಿಷ್ಠ ೧೦ ಜನ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿರುವಾಗ ನಾನು ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುವ ವಿಧಾನ ತಿಳಿಯಿತು" ಎಂದಿದ್ದಾರೆ.
ಇಂತಹ ನಡೆ ಇಡಲು ಕಾರಣಗಳನ್ನು ವಿವರಿಸಿರುವ ಅವರು "ನಾನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಲು ದಾಧ್ರಿ ಘಟನೆ ಒಂದೆ ಕಾರಣವಲ್ಲ ಬದಲಾಗಿ ದೇಶದಲ್ಲಿ ದಬ್ಬಾಳಿಕೆಯ ಆಡಳಿತ ಹೆಚ್ಚುತ್ತಿದ್ದು ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವುದನ್ನು ಪ್ರತಿಭಟಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಬಾರ್ಗೋಹೇನ್ ಅವರ 'ಪಿತಾ ಪುತ್ರ' (ತಂದೆ ಮಗ) ಕಾದಂಬರಿಗೆ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು.
Advertisement