ಅಸ್ಸಾಂ ಸಿಜೆ ವಿರುದ್ಧ ರಾಷ್ಟ್ರಪತಿಗೆ ದೂರು

ಈಶಾನ್ಯ ರಾಜ್ಯ ಅಸ್ಸಾಂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಕರ್ನಾಟಕ ಮೂಲದ ಕೆ.ಶ್ರೀಧರ್ ರಾವ್ ಕರ್ತವ್ಯ ನಿರ್ವಹಣೆ ನಿಷ್ಠೆ ತೋರುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ...
ಅಸ್ಸಾಂ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ (ಸಂಗ್ರಹ ಚಿತ್ರ)
ಅಸ್ಸಾಂ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ (ಸಂಗ್ರಹ ಚಿತ್ರ)

ಬೆಂಗಳೂರು: ಈಶಾನ್ಯ ರಾಜ್ಯ ಅಸ್ಸಾಂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ  ಕರ್ನಾಟಕ ಮೂಲದ ಕೆ.ಶ್ರೀಧರ್ ರಾವ್ ಕರ್ತವ್ಯ ನಿರ್ವಹಣೆ ನಿಷ್ಠೆ ತೋರುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ.

ಗೌಹಾಟಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳ (ಆ್ಯಕ್ಟಿಂಗ್) ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ತಲೆಎತ್ತಿದ್ದು ಇದರಿಂದ ಕೋರ್ಟ್‍ನ ಐಕ್ಯತೆ, ಗೌರವ ಹಾಗೂ ಘನತೆ ಹಾಗೂ  ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ವಿವರಿಸಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ನ್ಯಾ.ಶ್ರೀಧರ್ ರಾವ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಕಲಾಪಗಳಲ್ಲಿ ಭಾಗಿಯಾಗುತ್ತಿಲ್ಲ. ಪೀಠದಲ್ಲಿ ತಡವಾಗಿ ಕುಳಿತುಕೊಳ್ಳುವ ಅವರು, ಬೇಗ ಎದ್ದು ಹೋಗುತ್ತಾರೆ. ಮುಖ್ಯ  ನ್ಯಾಯಮೂರ್ತಿಯಂತಹ ಉನ್ನತ ಸ್ಥಾನದಲ್ಲಿ ರುವ ಅವರು ಬಹುತೇಕ ಪ್ರತಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ವಾರಾಂತ್ಯಕ್ಕೆ ಬೆಂಗಳೂರಿಗೆ ಹೋದರೆ  ಸೋಮವಾರ ತಡವಾಗಿ ವಾಪಸ್ ಬರುತ್ತಾರೆ.

ಕೆಲವೊಮ್ಮೆ ಕಲಾಪ ನಡೆಸುತ್ತಾರೆ, ಕೆಲವೊಮ್ಮೆ ನಡೆಸುವುದೇ ಇಲ್ಲ. ನ್ಯಾಯಾಲಯದ ಕಾರ್ಯ ಕಲಾಪ ನಡೆಸುವಾಗ ಅಸಹಜವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ. ಇವರ  ಪ್ರತಿಕ್ರಿಯೆಗಳಿಗೆ ಹಲವು ಬಾರಿ ವಕೀಲರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಆರಂಭದಿಂದಲೂ ನ್ಯಾ. ಶ್ರೀಧರ್ ರಾವ್ ಅವರ ಬಗ್ಗೆ ವಕೀಲರಲ್ಲಿ ಅಸಮಾಧಾನ ಮೂಡಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. 2015ರ ಆಗಸ್ಟ್ ತಿಂಗಳಿಂದಲೇ ನ್ಯಾ.ಶ್ರೀಧರ್ ರಾವ್ ಹಾಗೂ ಗೌಹಾಟಿ ಬಾರ್ ಅಸೋಸಿಯೇಷನ್ ಸದಸ್ಯರ ನಡುವೆ ಸಂಬಂಧ ಸರಿಯಿರಲಿಲ್ಲ. ಈ ಹಿಂದೆ ಸಾರ್ವಜನಿಕರ  ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಕೊಹಿಮಾ, ಇಟಾನಗರ್ ಪೀಠಗಳಿಂದ ಗೌಹಾಟಿ ಮುಖ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಆದರೆ. ನ್ಯಾ.ಶ್ರೀಧರ್ ರಾವ್ ಅವರು ಈ ಎಲ್ಲ ಪಿಐಎಲ್‍ಗಳನ್ನು  ಸಂಬಂಧಪಟ್ಟ ವಕೀಲರ ಗಮನಕ್ಕೆ ತಾರದೆ ವಾಪಸ್ ಕೊಹಿಮಾ ಹಾಗೂ ಇಟಾನಗರ್ ಪೀಠಗಳಿಗೆ ಕಳುಹಿಸಿದ್ದರು. ಇದರಿಂದ ವಕೀಲರು ಹಾಗೂ ನ್ಯಾ.ಶ್ರೀಧರ್ ಅವರ ನಡುವಿನ ವೈಮನಸ್ಸು ಇನ್ನಷ್ಟು ಬಿಗಡಾಯಿಸಿತು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ರೋಸ್ ವ್ಯಾಲಿ ಹೋಟೆಲ್ಸ್ ಆ್ಯಂಡ್ ಎಂಟರ್ ಟೇನ್‍ಮೆಂಟ್ ಮತ್ತು ಅಸ್ಸಾಂ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ ಬೆಂಗಳೂರಿನಲ್ಲಿರುವ ಅವರ ವಕೀಲ ಪುತ್ರನ ಮೂಲಕ ವಕೀಲರೊಬ್ಬರು ರು.5  ಲಕ್ಷ ಲಂಚದ ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಆದರೆ, ಆಮಿಷ ಬಂದಾಗಲೇ ಈ ವಿಚಾರವನ್ನು ಅವರು ಬಹಿರಂಗಪಡಿಸದೆ ಸುಮ್ಮನೇ ಇದ್ದದ್ದು ಅನುಮಾನಾಸ್ಪದವಾಗಿದೆ. ಅಲ್ಲದೇ ಆಮಿಷ  ಒಡ್ಡಿದ ವಕೀಲರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಈ ಪ್ರಕರಣವನ್ನು ನ್ಯಾ.ಶ್ರೀಧರ್‍ರಾವ್ ಹಾಗೂ ನ್ಯಾ.ಪಿ.ಕೆ ಸೈಕಿಯಾ ಅವರಿದ್ದ ವಿಭಾಗೀಯ ಪೀಠ ಇತ್ಯರ್ಥಪಡಿಸಿತ್ತು. ಈ ಕುರಿತು ಪ್ರಮಾಣಿಕೃತ ತೀರ್ಪಿನ ಪ್ರತಿಯನ್ನು ಎರಡೂ ಕಡೆಯವರು ಕೇಳಿದ್ದರೂ ಅದನ್ನು ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾ.ಶ್ರೀಧರ್ ರಾವ್ ಅವರ ಕರ್ತವ್ಯನಿಷ್ಠೆ ಬಗ್ಗೆ ಅನುಮಾನಗಳು ಎದ್ದಿವೆ.

ಈ ಕಾರಣಗಳಿಂದ  ಅವರು ಗೌಹಾಟಿ ಹೈಕೋರ್ಟ್‍ನ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವುದು ಅನುಮಾನವಿದೆ. ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದು ಸದ್ಯ ತಲೆದೋರಿರುವ ಈ ಸಮಸ್ಯೆಗೆ ಪರಿಹಾರ  ಕಾಣಿಸಲು ಮುಂದಾಗಬೇಕು. ಅಲ್ಲದೇ, ಶ್ರೀಧರ್ ರಾವ್ ಅವರ ನಿವೃತ್ತಿವರೆಗೂ ಅವರಿಗೆ ಸಂಬಂಧಿಸಿದ ಕೆಲಸಗಳನ್ನು ವಾಪಸ್ ತೆಗೆದುಕೊಂಡರೆ ಇನ್ನೂ ಸೂಕ್ತ ಎಂದು ಮನವಿ ಪತ್ರದಲ್ಲಿ ಬಾರ್ ಅಸೋಸಿಯೇಷನ್ ರಾಷ್ಟ್ರಪತಿಗೆ ಸಲ್ಲಿಸಿರುವ ಪತ್ರದಲ್ಲಿ ಮನವಿ ಮಾಡಿದೆ. ಈ ಸಂಬಂಧ ನ್ಯಾ. ಶ್ರೀಧರರಾವ್ ಅವರನ್ನು ಸಂಪರ್ಕಿಸಲು ಪತ್ರಿಕೆ ಯತ್ನಿಸಿತಾದರೂ, ಅವರು ಲಭ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com