ಕಲಬುರ್ಗಿ ಹತ್ಯೆಗೆ ಸಿಬಿಐ ತನಿಖೆ ಬೇಡ: ಗೋವಿಂದ ಪಾನ್ಸರೆ ಕುಟುಂಬದ ಮನವಿ
ಹುಬ್ಬಳ್ಳಿ: ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸದಂತೆ ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಕುಟುಂಬದ ಸದಸ್ಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ವಿಚಾರವಾದಿಗಳಾದ ಡಾ. ನರೇಂದ್ರ ದಾಭೋಲ್ಕರ, ಗೋವಿಂದರಾವ್ ಪಾನ್ಸರೆ ಹಾಗೂ ಲಿಂಗಣ್ಣ ಸತ್ಯಂಪೇಟ ಅವರ ಹತ್ಯೆ ಪ್ರಕರಣಗಳ ತನಿಖೆಯಲ್ಲಿ ಸಿಬಿಐ ಅತಿಯಾದ ವಿಳಂಬ ಮಾಡುತ್ತಿರುವುದು ಈ ವಿರೋಧಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಗದಗಬೆಟಗೇರಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ ಹಾಗೂ ಇತರ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಯಾವುದೇ ಕಾರಣಕ್ಕೂ ಡಾ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಬಾರದು. ಈಗ ತನಿಖೆ ನಡೆಸುತ್ತಿರುವ ಸಿಐಡಿ ತಂಡದಿಂದಲೇ ಇನ್ನಷ್ಟು ಚುರುಕಾದ ತಲಿಖೆ ನಡೆಯಲಿ ಎಂದು ಕೋರಿದ್ದಾರೆ.
ಈಗಾಗಲೇ ದೇಶದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಪ್ರಕರಣಗಳನ್ನು ಬೇಧಿಸುವಲ್ಲಿ ಸಾಕಷ್ಟು ವಿಳಂಬ ಡಿದ್ದು, ಡಾ.ಕಲಬುರ್ಗಿ ಹತ್ಯೆ ಪ್ರಕರಣವೂ ಅದೇ ಸಾಲಿಗೆ ಸೇರಬಾರದು ಎಂದಿದ್ದಾರೆ. ಸಂಶೋಧಕ ಡಾ.ಕಲಬುರ್ಗಿಯವರ ಹತ್ಯೆಯ ತನಿಖೆಯನ್ನು ತಮ್ಮ ನಿರ್ದೇಶನದ ಮೇರೆಗೆ ಸಿಐಡಿ ಗಂಭೀರವಾಗಿ ಪರಿಗಣಿಸಿ 12 ತಂಡಗಳನ್ನು ರಚಿಸಿ ತನಿಖೆ ಮಾಡುತ್ತಿದೆ. ಅದು ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸಿ ಕೊಲೆಗಾರರನ್ನು, ಅವರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಟಿ.ಜೆ.ಜಾರ್ಜ್ ಅವರನ್ನು ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಘೋಷಿಸಿ, ಸಿಬಿಐ ಬರಲಿಕ್ಕಿಲ್ಲ ಎಂದುರಾಗ ಬದಲಿಸಿದ್ದ ಸರ್ಕಾರಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಇದು ಸಹಕಾರಿಯಾಗಬಹುದು.
ಪಾನ್ಸರೆ ಕುಟುಂಬ ಭೇಟಿ
ಈ ಮಧ್ಯೆ ಭಾನುವಾರ ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಗೋವಿಂದರಾವ್ ಪಾನ್ಸರೆ ಕುಟುಂಬದ ಸದಸ್ಯರು ಪರಸ್ಪರ ಚರ್ಚಿಸಿದರು. ಇಂದಿನ ದಿನಗಳಲ್ಲಿ ಸತ್ಯ ಹೇಳುವುದೇ ಕಠಿಣವಾಗಿದೆ. ಗುಂಡಿಟ್ಟು ಕೊಲ್ಲುವ ಮಟ್ಟಕ್ಕೆ ಮೂಲಭೂತವಾದಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ, ಸತ್ಯಕ್ಕಾಗಿ ಬಲಿದಾನವಾಗಿರುವ ಮಹನಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುವುದೇ ಅವರಿಗೆ ನಾವು ಸಲ್ಲಿಸಿವ ನಿಜವಾದ ಶ್ರದ್ಧಾಂಜಲಿ. ನಾವೂ ಧೈರ್ಯದಿಂದ ಸತ್ಯವನ್ನೇ ಪ್ರತಿಪಾದಿಸೋಣ ಎಂದು ಸಾಂತ್ವನ ಹೇಳಿದರು. ಸುಮಾರು ಹೊತ್ತು ಉಭಯ ಕುಟುಂಬಗಳ ಸದಸ್ಯರು ತಮ್ಮ ನೋವುಗಳನ್ನು ಹಂಚಿಕೊಂಡು ತುಸು ಹಗುರಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದರಾವ್ ಪಾನ್ಸರೆ ಸೊಸೆ ಮೇಘನಾ ಪಾನ್ಸರೆ, `ಸಿಬಿಐ ಮೇಲೆ ನಮ್ಮ ವಿಶ್ವಾಸ ಉಳಿದಿಲ್ಲ. ತನಿಖೆಯ ಅತಿಯಾದ ವಿಳಂಬದಿಂದ ಸರಿಯಾದ ನ್ಯಾಯ ಸಿಗುವುದಿಲ್ಲ.
ಹಾಗಾಗಿ ದಾಬೋಲ್ಕರ, ಪಾನ್ಸರೆ ಮತ್ತು ಕಲಬುರ್ಗಿ ಮೂವರೂ ವಿಚಾರವಾದಿಗಳ ಕುಟುಂಬದ ಸದಸ್ಯರು ಸೆಪ್ಟಂಬರ್ 13ರ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಯಾವುದೇ ಕಾರಣಕ್ಕೂ ಡಾ.ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಡಿ. ಬದಲಾಗಿ ವಿಶೇಷ ತನಿಖಾದಳ ರಚಿಸಿ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಯುಂತೆ ನೋಡಿಕೊಳ್ಳುವ ಮೂಲಕ ನಮಗೆಲ್ಲ ನ್ಯಾಯ ಕೊಡಿಸುವಂತೆ ಕೋರಲಿದ್ದೇವೆ' ಎಂದರು. ಕಲಬುರ್ಗಿಯವರ ಪುತ್ರ ಶ್ರೀ ವಿಜಯ ಮಾತನಾಡಿ, ಸಿಐಡಿ ತನಿಖೆಯಲ್ಲಿ ನಮಗೆ ವಿಶ್ವಾಸವಿದೆ. ಶೀಘ್ರದಲ್ಲಿ ಅವರಿ ಆರೋಪಿಗಳನ್ನು ಬಂಧಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ. ಆದರೂ ನ್ಯಾಯಾಲಯದಲ್ಲಿ ಈ ಹತ್ಯೆ ವಿಷಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಚಿಂತಿಸುತ್ತಿರುವುದಾಗಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ