ಧರ್ಮಸ್ಥಳ ದೇಗುಲ ಮುಜರಾಯಿಗೆ?

ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ...
ಶ್ರೀ ಕ್ಷೇತ್ರ ಧರ್ಮಸ್ಥಳ (ಸಂಗ್ರಹ ಚಿತ್ರ)
ಶ್ರೀ ಕ್ಷೇತ್ರ ಧರ್ಮಸ್ಥಳ (ಸಂಗ್ರಹ ಚಿತ್ರ)

ದ.ಕನ್ನಡ: ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ಸೇರಿಸಲು ಸರ್ಕಾರದ  ಮಟ್ಟದಲ್ಲಿ ಪ್ರಯತ್ನ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ನೀಡಿರುವ ದೂರುಗಳ ಆಧಾರದ ಮೇಲೆ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ  ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಶ್ರೀ ಕ್ಷೇತ್ರದ ದೇವಸ್ಥಾನವನ್ನು ಇಲಾಖೆ ವ್ಯಾಪ್ತಿಗೆ ಸೇರಿಸುವ ಪ್ರಯತ್ನ 6 ತಿಂಗಳ ಹಿಂದೆಯೇ ಆರಂಭವಾಗಿದ್ದು, ದೇವಸ್ಥಾನದ ವಿರುದ್ಧ  ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ಕ್ರಮಗಳು ಜರುಗಿವೆ.

ಅಂದರೆ ಇಲಾಖೆಯ ಕಾಯ್ದೆ ಸೆಕ್ಷನ್ 23ರ ಪ್ರಕಾರ ಇದನ್ನು ಸರ್ಕಾರದ ಅಧಿಸೂಚಿತ ಸಂಸ್ಥೆ ಎಂದು ಘೋಷಿಸಲು ಸಾಧ್ಯವೇ ಎಂದು ನೋಡಲಾಗುತ್ತಿದೆ. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರ  ಉನ್ನತಮಟ್ಟದಲ್ಲಿ ಚರ್ಚಿಸಬೇಕಿರುವುದರಿಂದ ಸರ್ಕಾರದಿಂದ ಯಾವುದೇ ಆಧಿಕೃತ ಆದೇಶ ಹೊರಬಿದ್ದಿಲ್ಲ. ಶ್ರೀಕ್ಷೇತ್ರವನ್ನು ಮುಜರಾಯಿ  ಇಲಾಖೆ ವ್ಯಾಪ್ತಿಗೆ ತಂದಲ್ಲಿ ನಿರ್ವಹಣೆ ಸಮಸ್ಯೆ ಹೆಚ್ಚಾಗಬಹುದು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜೈನರ ಬಳಿ ಇರುವುದು ಬೇಡ
ಶ್ರೀಕ್ಷೇತ್ರ ಧರ್ಮಸ್ಥಳ ಐತಿಹಾಸಕ ದೇವಸ್ಥಾನವಾಗಿದ್ದು,  ವಿಶ್ವದ ವಿವಿಧ ಮೂಲಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ದಿನಕ್ಕೆ ಸರಾಸರಿ 10,000 ಭಕ್ತರು ಭೇಟಿ ನೀಡುತ್ತಿದ್ದು, ನಿತ್ಯ ಅನ್ನ  ದಾಸೋಹ ನಡೆಯುತ್ತದೆ. ದೇಶದ ನಾನಾ ಮೂಲೆಗಳಿಂದ ಭಕ್ತರು ಬರುತ್ತಿರುವುದರಿಂದ ದೇವಸ್ಥಾನಕ್ಕೆ ಕೋಟ್ಯಂತರ ರುಪಾಯಿ ಕಾಣಿಕೆ ಲಭಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ರಂಜನ್ ಯರಡೂರು, ಗುರುವಾಯೂರ್‍ಕರ್ ಹಾಗೂ ಸೋಮನಾಥ ನಾಯಕ್ ಎಂಬುವರು ದೇವಸ್ಥಾನದಲ್ಲಿ ಜಮೀನು ಮತ್ತು ಇತರ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ದೂರು ಸಲ್ಲಿಸಿದ್ದಾರೆ.

ಅವರು ಇತ್ತೀಚಿಗೆ ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಿದ್ದಾರೆ. ಆನಂತರ ಮುಜರಾಯಿ ಆಯುಕ್ತರನ್ನು ಭೇಟಿ  ಮಾಡಿದ್ದರು. ಇದು ಶಿವ ದೇವಾಲಯವಾಗಿದ್ದು, ಜೈನ  ಧರ್ಮದವರ ನಿಯಂತ್ರಣದಲ್ಲಿದೆ. ಆದ್ದರಿಂದ ಮುಜರಾಯಿ ಕಾಯ್ದೆ ಪ್ರಕಾರ ಸರ್ಕಾರ ಎಲ್ಲ ದೇವಸ್ಥಾನಗಳನ್ನು ಅಧಿಸೂಚಿತ ಸಂಸ್ಥೆ ಎಂದು  ಘೋಷಿಸಿದ ಮಾದರಿಯಲ್ಲೇ ಈ ದೇವಸ್ಥಾನವನ್ನೂ ಘೋಷಿಸಬೇಕು ಎಂದು ಒತ್ತಾಯಿಸಿದ್ದರು.

ಇಲಾಖೆ ಹೇಳುವುದೇನು?
ದೇವಸ್ತಾನದ ಬಗ್ಗೆ ಆಗಾಗ ದೂರುಗಳು ಬರುತ್ತಲೇ ಇರುತ್ತವೆ. ಐದಾರು ತಿಂಗಳ ಹಿಂದೆ ಒಂದು ದೂರು ಬಂದಿತ್ತು. ಆನಂತರ ದೂರುಗಳು ಬರುತ್ತಲೇ ಇವೆ. ಈತನಕ ಸುಮಾರು 5 ದೂರುಗಳು  ದೇವಸ್ಥಾನದ ಜಾಗ ಮತ್ತು ಅಲ್ಲಿನ ಅಕ್ರಮಗಳ ಬಗ್ಗೆ ಸಲ್ಲಿಕೆಯಾಗಿವೆ. ಅವನ್ನು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ದೇವಸ್ಥಾನವನ್ನು ಇಲಾಖೆ ವ್ಯಾಪ್ತಿಗೆ ಸೇರಿಕೊಳ್ಳುವ  ಬಗ್ಗೆ ಕಾನೂನು ಸಲಹೆಯನ್ನೂ ಪಡೆಯಲಾಗುತ್ತಿದ್ದು, ಇಲಾಖೆಯ ಪ್ಯಾನಲ್‍ನಲ್ಲಿರುವ ಕಾನೂನು ತಜ್ಞರಿಂದ ಅಭಿಪ್ರಾಯ ನಿರೀಕ್ಷಿಸಲಾಗುತ್ತಿದ್ದು, ಅವರಿಂದ ಶಿಫಾರಸು ಬಂದ ನಂತರ ಆಯುಕ್ತರು  ಅಗತ್ಯ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಇಲಾಖೆಯ ಅಧಿಕಾರಿ ಜಗದೀಶ್ ಹೇಳಿದ್ದಾರೆ.

ಇಲಾಖೆಗೆ ಆಯುಕ್ತರಾಗಿ ನಾನು ಇತ್ತೀಚೆಗಷ್ಟೇ ಬಂದಿದ್ದೇನೆ. ಧರ್ಮಸ್ಥಳ ದೇವಸ್ಥಾನದ ಬಗ್ಗೆ ಕೆಲವು ದೂರುಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದುಸೂಚಿಸಲಾಗಿದೆ.
-ಆರ್ ಆರ್ ಜನ್ನು, ಮುಜರಾಯಿ ಇಲಾಖೆ ಆಯುಕ್ತ

ದೇವಸ್ಥಾನದಲ್ಲಿರುವ ಅಕ್ರಮಗಳ ಬಗ್ಗೆ ದೂರುಗಳು ಬಂದಿವೆ. ಅವುಗಳನ್ನು ಸಹಾಯಕ ಆಯುಕ್ತರ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದ್ದು, ಅವರಿಂದ ವರದಿ ಬರುತ್ತಿದ್ದಂತೆ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
-ಇಬ್ರಾಹಿಂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com