
ಬೆಳಗಾವಿ: ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪನ್ಸರೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಸಿಬ್ಬಂದಿ ಗುರುವಾರ ಮತ್ತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದೆ.
ಗೋವಿಂದ ಪನ್ಸರೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ವಿಶೇಷ ತನಿಖಾದಳದ ಅಧಿಕಾರಿಗಳು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಮೀರ್ ವಿಷ್ಟು ಗಾಯಕ್ವಾಡ್ ನೀಡಿರುವ ಮಾಹಿತಿ ಮೇರೆಗೆ ಸಂಕೇಶ್ವರದ ನಿವಾಸಿಗಳಾದ ಶ್ರೀಧರ್ ಜಾದವ್ (21) ಮತ್ತು ಸತೀಶ್ ಜಾದವ್ (23) ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಮೂಲಕ ಗೋವಿಂದ ಪನ್ಸರೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಂತಾಗಿದೆ.
ವೀಕ್ಷಣೆಯಲ್ಲಿ "ಸನಾತನ ಸಂಸ್ಥಾ"
ಇನ್ನು ಗೋವಿಂಗ್ ಪನ್ಸರೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಬಂಧಿತನಾಗಿರುವ ಸಮೀರ್ ವಿಷ್ಟು ಗಾಯಕ್ವಾಡ್ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿದ್ದು, ಈ ಸಂಸ್ಥೆಯನ್ನು ತನಿಖಾಧಿಕಾರಿಗಳು ವೀಕ್ಷಣೆಯಲ್ಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಮೀರ್ ಗಾಯಕ್ವಾಡ್ ನ ದೂರವಾಣಿ ಕರೆಗಳ ಮಾಹಿತಿ ಪಡೆದಿರುವ ಅಧಿಕಾರಿಗಳು ಸನಾತನ ಸಂಸ್ಥೆಯ ವಿರುದ್ಧವೂ ತನಿಖೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement