ಕ್ರಿಕೆಟ್‍ಗೆ ಕೋಡು ಮೂಡಿಸಿದ ಮಾಂತ್ರಿಕ

ಜಂಟಲ್‍ಮನ್ಸ್ ಗೇಮï ಎಂದೇ ಕರೆಸಿಕೊಳ್ಳುತ್ತಿದ್ದ ಕ್ರಿಕೆಟ್‍ಗೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೋಡು ಮೂಡಿಸಿದ ಅತ್ಯುತ್ತಮ ಕ್ರಿಕೆಟ್...
ಜಗಮೋಹನ್ ದಾಲ್ಮಿಯಾ
ಜಗಮೋಹನ್ ದಾಲ್ಮಿಯಾ

ಕೋಲ್ಕತಾ: ಜಂಟಲ್‍ಮನ್ಸ್ ಗೇಮ್ ಎಂದೇ ಕರೆಸಿಕೊಳ್ಳುತ್ತಿದ್ದ ಕ್ರಿಕೆಟ್‍ಗೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೋಡು ಮೂಡಿಸಿದ ಅತ್ಯುತ್ತಮ ಕ್ರಿಕೆಟ್ ಆಡಳಿತಗಾರರಲ್ಲಿ ಒಬ್ಬರೆನಿಸಿದ್ದವರು ಜಗಮೋಹನ್ ದಾಲ್ಮಿಯಾ.

ಸುಮಾರು ಮೂರುವರೆ ದಶಕಗಳ ಕಾಲ ಕ್ರಿಕೆಟ್ ಆಡಳಿತಗಾರನಾಗಿ ಕಾರ್ಯನಿರ್ವಹಿಸಿರುವ ದಾಲ್ಮಿಯಾ ಕ್ರೀಡೆಯನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಿದ ಕೀರ್ತಿ ಸಂಪಾದಿಸಿದ್ದಾರೆ. ಇವರ ಕ್ರಿಕೆಟ್ ಆಡಳಿತದ ಸುದೀರ್ಘ ಪಯಣದಲ್ಲಿ ಅವರ ಹೆಜ್ಜೆ ಗುರುತುಗಳು ಐತಿಹಾಸಿಕವೇ.

1940 ಮೇ 30ರಂದು ಕೋಲ್ಕತಾದ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಜಗಮೋಹನ್ ದಾಲ್ಮಿಯಾ, ಸ್ಕಾಟಿಷ್ ಚರ್ಚ್ ಕಾಲೇಜಿ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಆರಂಭದಲ್ಲಿ ವಿಕೆಟ್ ಕೀಪರ್ ಆಗಿ ಕ್ಲಬ್‍ಗಳ ಪರ ಆಡಿದ್ದ ದಾಲ್ಮಿಯಾ, ಒಂದು ಬಾರಿ ದ್ವಿಶತಕ ಬಾರಿಸಿದ್ದು ಅವರ ಬ್ಯಾಟಿಂಗ್ ಕುಶಲತೆಗೆ ಸಾಕ್ಷಿ. ನಂತರ ತಮ್ಮ ತಂದೆಯವರು ಸ್ಥಾಪಿಸಿದ್ದ ಎಂ.ಎಲ್. ದಾಲ್ಮಿಯಾ ಅಂಡ್ ಕೊ. ಕಂಪನಿಯನ್ನು ಸೇರಿದ ಅವರು ನಂತರ 1963ರಲ್ಲಿ ಎಂ.ಪಿ. ಬಿರ್ಲಾ ಪ್ಲಾನಿಟೋರಿ ಯಂ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು.

1979ರಲ್ಲಿ ಮೊದಲ ಬಾರಿಗೆ ಬಿಸಿಸಿಐ ಪ್ರವೇಶಿಸಿದ ದಾಲ್ಮಿಯಾ ನಂತರ ನಿರಂತರವಾಗಿ ತಮ್ಮ ಕೊನೆಯ ಉಸಿರಿನವರೆಗೂ ಕ್ರಿಕೆಟ್ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ತಬ್ಧಗೊಂಡ ಕ್ರಿಕೆಟ್ ಜಗತ್ತು ಭಾರತೀಯ ಕ್ರಿಕೆಟ್‍ನ ಗಾಡ್ಫಾದರ್ ಎಂದೇ ಕರೆಸಿಕೊಳ್ಳುತ್ತಿದ್ದ ಜಗಮೋಹನ್ ದಾಲ್ಮಿಯಾ ಅಗಲಿಕೆ ವಿಶ್ವ ಕ್ರಿಕೆಟ್ ಅನ್ನು ಕ್ಷಣಕಾಲ ಸ್ತಬ್ಧಗೊಳಿಸಿತು.

ಕೇವಲ ಭಾರತೀಯ ಕ್ರಿಕೆಟ್ ಗೆ ಮಾತ್ರವೇ ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಅಧ್ಯಕ್ಷರಾಗಿಯೂ ದಕ್ಷ ನಿರ್ವಹಣೆ ನೀಡಿದ್ದ ದಾಲ್ಮಿಯಾ ವಿಶ್ವ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅಪಾರ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದ ಹೃದಯಾಘಾತದಿಂದಾಗಿ ದಾಲ್ಮಿಯಾ ಅವರನ್ನು ಕೂಡಲೇ ಬಿ.ಎಂ. ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಒಡನೆಯೇ ಕಾರ್ಯಪ್ರವೃತ್ತರಾದ ವೈದ್ಯರು ಸೂಕ್ತ ಚಿಕಿತ್ಸೆಗೆ ಮುಂದಾದರೂ, ಅವರನ್ನು ಬದುಕುಳಿಸುವುದು ಸಾಧ್ಯವಾಗಲಿಲ್ಲ.

``ಜಠರದ ಕರುಳಿನಲ್ಲಿ ಉಂಟಾದ ರಕ್ತಸ್ರಾವ ಮತ್ತು ಅಂತರಿಕ ಅಂಗಗಳ ವೈಫಲ್ಯದಿಂದಾಗಿ ಅವರು ಕೊನೆಯುಸಿರೆಳೆದರು'' ಎಂದು ವೈದ್ಯರು ತದನಂತರ ಖಚಿತಪಡಿಸಿದರು. ಅನಾರೋಗ್ಯದ ಹಿನ್ನೆಲೆಯಿಂದಾಗಿಯೇ ಬಿಸಿಸಿಐ ಕಾರ್ಯಚಟುವಟಿಕೆಗಳಲ್ಲಿ ಇತ್ತೀಚೆಗೆ ದಾಲ್ಮಿಯಾ ಸಕ್ರಿಯರಾಗಿರಲಿಲ್ಲ. ಹೀಗಾಗಿ ಬಿಸಿಸಿಐನ ದೈನಂದಿನ ಕಾರ್ಯಚಟುವಟಿಕೆಯನ್ನು ಅವರ ಪುತ್ರ ಅಭಿಷೇಕ್ ನಿರ್ವಹಿಸುತ್ತಿದ್ದರೆಂದೂ ಹೇಳಲಾಗಿತ್ತು.

ಗಂಗೂಲಿ ಜತೆಗಿನ ಒಡನಾಟ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜತೆಗೆ ದಾಲ್ಮಿಯಾ ಅವರ ಒಡನಾಟ ಅನನ್ಯವಾಗಿತ್ತು. ಬಿಸಿಸಿಐ ಆಡಳಿತಾಧಿಕಾರಿಯಾಗಿ ವಿಶ್ವ ಮಟ್ಟದಲ್ಲಿ ಭಾರತೀಯ ಕ್ರಿಕೆಟ್‍ಗೆ ಘನತೆ ಹಾಗೂ ಯಜಮಾನಿಕೆ ತಂದುಕೊಡುವ ನಿಟ್ಟಿನಲ್ಲಿ ದಾಲ್ಮಿಯಾ ಶ್ರಮಿಸಿದರೆ, ಮೈದಾನದಲ್ಲಿ ಭಾರತ ತಂಡವನ್ನು ಅಮೋಘವಾಗಿ ಮುನ್ನಡೆಸುವ ಕಾಯಕದಲ್ಲಿ ಗಂಗೂಲಿ ನಿರತರಾಗಿದ್ದರು. ಕೋಲ್ಕತಾದ ಈ ಈರ್ವರ ಕಾಲಘಟ್ಟವನ್ನು ಭಾರತೀಯ ಕ್ರಿಕೆಟ್‍ನ ಸುವರ್ಣ ಯುಗವೆಂದೇ ಕರೆಯಲಾಗಿದೆ.

ಇಂದು ಅಂತ್ಯ ಸಂಸ್ಕಾರ?
ದಾಲ್ಮಿಯಾ ಅವರ ಅಂತ್ಯಸಂಸ್ಕಾರ ಬಹುಶಃಸೋಮವಾರ ನೆರವೇರುವ ಸಾಧ್ಯತೆ ಇದೆ. ದಾಲ್ಮಿಯಾ ಅವರ ನಿಧನದ ವಾರ್ತೆ ಕೇಳಿದ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ಕೋಲ್ಕತಾಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಗೊತ್ತಾಗಿದೆ. ಸೋಮವಾರ ಮಧ್ಯಾಹ್ನ 12ರಿಂದ 3 ಗಂಟೆವರೆಗೂ ದಾಲ್ಮಿಯ ಅವರ ಪಾರ್ಥೀವ ಶರೀರವನ್ನು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇರಿಸಲಾಗುವುದು.

ಆಡಳಿತ ಹೆಜ್ಜೆ ಗುರುತು

  • 1979- ಮೊದಲ ಬಾರಿಗೆ ಬಿಸಿಸಿಐಗೆ ಕಾಲಿಟ್ಟ ವರ್ಷ
  • 1983- ಬಿಸಿಸಿಐನ ಖಜಾಂಚಿಯಾಗಿ ಅಧಿಕಾರ ಸ್ವೀಕಾರ. ಅದೇ ವರ್ಷ ಭಾರತ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • 1987- ಇಂದರ್‍ಜಿತ್ ಸಿಂಗ್ ಬಿಂದ್ರಾ ಅವರ ಜತೆಗೂಡಿ ತಮ್ಮ ಆಡಳಿತದ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯವನ್ನು ದಕ್ಷಿಣ ಏಷ್ಯಾಕ್ಕೆ ತಂದರು.
  • 1996- ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರಾಗಿ ಆಯ್ಕೆ. 23 ಮತಗಳನ್ನು ಪಡೆದು ಆಸ್ಟ್ರೇಲಿಯಾದ ಮಾಲ್ಕಂ ಗ್ರೇ (13) ಅವರನ್ನು ಮಣಿಸಿ ಉನ್ನತ ಹುದ್ದೆ ಅಲಂಕರಿಸಿದರು. ಅದೇ ವರ್ಷ ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ವಿಶ್ವಕಪ್ ಆತಿಥ್ಯ.
  • 1997- ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.
  • 2001-- ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ.
  • 2013- ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ.
  • 2015- ಮಾ.2ರಂದು ಬಿಸಿಸಿಐನ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕಾರ
  • 2015- ಸೆ.20ರಂದು ವಿಧಿವಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com