ಹೊಸ ಮೀಸಲು ರಾಗ

ಗುಜರಾತ್‍ನ ಪಟೇಲ್ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ದೇಶದ ಮೀಸಲಾತಿ ನೀತಿಯನ್ನು ಪುನರ್‍ಪರಿಶೀಲಿಸುವಂತೆ ಆರ್‍ಎಸ್‍ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ...
ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ (ಸಂಗ್ರಹ ಚಿತ್ರ)
ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ (ಸಂಗ್ರಹ ಚಿತ್ರ)

ನವದೆಹಲಿ: ಗುಜರಾತ್‍ನ ಪಟೇಲ್ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ದೇಶದ ಮೀಸಲಾತಿ ನೀತಿಯನ್ನು ಪುನರ್‍ಪರಿಶೀಲಿಸುವಂತೆ ಆರ್‍ಎಸ್‍ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್  ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಆರ್‍ಎಸ್‍ಎಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಮೀಸಲಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಹಲವಾರು ವರ್ಷಗಳಿಂದ  ಮೀಸಲಾತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ಸಮುದಾಯದ ಆಶಯಕ್ಕೂ ಮತ್ತೊಂದು ಸಮುದಾಯದ ಆಶಯಕ್ಕೂ ಪರಸ್ಪರ ವ್ಯತ್ಯಾಸವಿರುತ್ತದೆ. ಹೀಗಾಗಿ  ಮೀಸಲಾತಿಯ ಪರಿಶೀಲನೆ ಅತ್ಯಗತ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಪ್ರಸಕ್ತ ಕಾಲದಲ್ಲಿ ಮೀಸಲಾತಿಯ ಅಗತ್ಯವಿದೆಯೇ ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ. ಇಂದು ಆರ್ಥಿಕ ಬಡತನದ ಆಧಾರದ ಮೇಲೆ   ಮೀಸಲಾತಿ ಇರಬೇಕೇ ಹೊರತು, ಜಾತಿಗಳ ಆಧಾರದಲ್ಲಿ ಅಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ 15 ದಿನಗಳ ಹಿಂದೆಯೇ ಅಂಕಣವೊಂದರ ಮೂಲಕ ಪ್ರತಿಪಾದಿಸಿದ್ದೆ. ಮೋಹನ್ ಭಾಗವತ್ ಏನು  ಹೇಳಿದ್ದಾರೋ ಗೊತ್ತಿಲ್ಲ. ಆದರೆ 21ನೇ ಶತಮಾನದಲ್ಲಿ ಆರ್ಥಿಕ ಅಸಮಾನತೆಯ ಆಧಾರದಲ್ಲಿ ಮೀಸಲು ನೀಡಬೇಕೇ ಹೊರತು ಜಾತಿಗಳ ಆಧಾರದಲ್ಲಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಮಿತಿ ರಚನೆಯಾಗಬೇಕು: ಮೀಸಲಾತಿಯ ಪರಿಶೀಲನೆಗೆ ``ಸಾಮಾಜಿಕ ಸಮಾನತೆಯ ಬದ್ಧತೆಯುಳ್ಳ'' ನಾಗರಿಕ ಸಮಾಜದ ಗಣ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕು. ಈ  ಸಮಿತಿಯು ಯಾರಿಗೆ ಮೀಸಲಾತಿ ಬೇಕು ಮತ್ತು ಎಷ್ಟು ಕಾಲ ಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಿ ಶಿಫಾರಸು ಮಾಡಬೇಕು. ರಾಜಕೀಯೇತರ ಸಮಿತಿ, ಅಂದರೆ ಸ್ವಾಯತ್ತ ಸಂಸ್ಥೆಯೊಂದು  ಮೀಸಲಾತಿಯ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಈ ಸಂಸ್ಥೆಯ ಮೇಲುಸ್ತುವಾರಿ ನಡೆಸಬೇಕು ಮತ್ತು ಪ್ರಾಮಾಣಿಕತೆ ಪ್ರದರ್ಶಿಸಬೇಕು ಎಂದಿದ್ದಾರೆ. ಈಗ  ಪಾಲನೆಯಾಗುತ್ತಿರುವ ಮೀಸಲಾತಿಗೂ, ಆಗ ಸಂವಿಧಾನದಲ್ಲಿ ಮೀಸಲಾತಿ ನೀಡಿದ ಪರಿಸ್ಥಿತಿಗೂ ವ್ಯತ್ಯಾಸವಿದೆ. ಅಂದು ಸಂವಿಧಾನ ಬರೆದವರ ತಲೆಯಲ್ಲಿ ಇಂದಿನ ಸಂಗತಿಗಳು ಇದ್ದಿರಲಿಲ್ಲ.  ಹೀಗಾಗಿ ಪುನರ್‍ಪರಿಶೀಲನೆಯಾಗಬೇಕು ಎಂದಿದ್ದಾರೆ.

ಜನ ಸಂಘ ಆರಂಭವಾದ ದಿನದಿಂದಲೂ ಬಿಜೆಪಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಎಸ್‍ಸಿ/ಎಸ್‍ಟಿ, ಹಿಂದುಳಿದ ಜನಾಂಗಗಳ ಮೀಸಲು ಪರವಾಗಿಯೇ ಇದೆ. ಹೀಗಾಗಿ ಬಿಜೆಪಿಗೆ  ಮೀಸಲು ಕುರಿತಂತೆ ಪುನರ್ ಚಿಂತನೆ ಮಾಡುವ ಅಗತ್ಯವೇ ಕಂಡು ಬರುವುದಿಲ್ಲ.
-ರವಿಶಂಕರ ಪ್ರಸಾದ್, ಕೇಂದ್ರ ದೂರಸಂಪರ್ಕ ಸಚಿವ

ಪ್ರಧಾನಿ ಮೋದಿ ಅವರ ಗುರು ಭಾಗವತ್ ಹೇಳಿದಂತೆ ರಾಜಕೀಯ ಕಾರಣಗಳಿಗಾಗಿ ಬಳಕೆ ಮಾಡಲಾಗುತ್ತಿರುವ ಮೀಸಲಾತಿಯನ್ನು ರದ್ದುಪಡಿಸಲಿ. ಹೇಗೂ ತಾವು ಟೀ ಮಾರುವ, ಹಿಂದುಳಿದ  ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ಹೇಳಿಯೇ ಮೋದಿ ಅಧಿಕಾರಕ್ಕೆ ಬಂದಿದ್ದಾರಲ್ಲ!
-ಲಾಲು ಪ್ರಸಾದ್ ಯಾದವ್, ಆರ್‍ಜೆಡಿ ಮುಖಂಡ

ಮೀಸಲಾತಿಯ ಪುನರ್ ಪರಿಶೀಲನೆಗಾಗಿ ರಾಜಕೀಯೇತರ ಸಮಿತಿಯ ರಚನೆಗೆ ಆಗ್ರಹಿಸಿರುವ ಮೋಹನ್ ಭಾಗವತ್ ಹೇಳಿಕೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ.  ಮೀಸಲು ವ್ಯವಸ್ಥೆ ಇನ್ನೂ ತನ್ನ ಗುರಿ ಮುಟ್ಟಿಲ್ಲ.
-ಕೆ.ಸಿ. ತ್ಯಾಗಿ ಜೆಡಿಯು ಮುಖಂಡ

ಮೀಸಲು ವ್ಯವಸ್ಥೆಯಿಂದ ದಲಿತರು, ಹಿಂದುಳಿದವರನ್ನು ದೂರ ಇಡುವ ಉದ್ದೇಶದಿಂದ ಇಡೀ ವ್ಯವಸ್ಥೆಯನ್ನೇ ಪುನರ್ ಪರಿಶೀಲಿಸಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
-ಅಶೋಕ್ ಚವಾಣ್, ಕಾಂಗ್ರೆಸ್ ಮುಖಂಡ

ಭಾಗವತ್ ಅವರು ಏನು ಹೇಳಿದ್ದಾರೆಂದು ಗೊತ್ತಿಲ್ಲ. ಆದರೆ, ಇದು 21ನೇ ಶತಮಾನ. ಹಾಗಾಗಿ ಈಗ ಮೀಸಲಾತಿ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ.
-ಮನೀಷ್ ತಿವಾರಿ, ಕಾಂಗ್ರೆಸ್ ಮುಖಂಡ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com