ಅಮೆರಿಕದಿಂದ ವಾಪಸ್ ಬಾರದ ದಿಗ್ವಿಜಯ ಸಿಂಗ್; ವಿಸ್ತರಣೆಗೆ ವಿರಾಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆದರೆ, ರಾಹುಲ್ ಗಾಂಧಿ ಅ.67 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅದಾದ ನಂತರ ಪುನಾರಚನೆ ಪ್ರಕ್ರಿಯೆಗಳಿಗೆ ಚಾಲನೆ ಸಿಗಲಿದೆ...
ಸಚಿವ ಸಂಪುಟ ವಿಸ್ತರಣೆ (ಸಂಗ್ರಹ ಚಿತ್ರ)
ಸಚಿವ ಸಂಪುಟ ವಿಸ್ತರಣೆ (ಸಂಗ್ರಹ ಚಿತ್ರ)

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆದರೆ, ರಾಹುಲ್ ಗಾಂಧಿ ಅ.67 ರಂದು  ರಾಜ್ಯಕ್ಕೆ ಭೇಟಿ ನೀಡಲಿದ್ದು, ಅದಾದ ನಂತರ ಪುನಾರಚನೆ ಪ್ರಕ್ರಿಯೆಗಳಿಗೆ ಚಾಲನೆ ಸಿಗಲಿದೆ.

ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸೆ. 23ರಂದು ರಾತ್ರಿ ಅಮೆರಿಕದಿಂದ ದೆಹಲಿಗೆ ವಾಪಸಾಗುವ ನಿರೀಕ್ಷೆ ಇತ್ತು. ಅವರ ಪುತ್ರಿ ಗಂಭೀರ ಸ್ವರೂಪದಲ್ಲಿ ಅನಾರೋಗ್ಯಕ್ಕೀಡಾಗಿದ್ದು  ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸೂಚನೆ ಮೇರೆಗೆ ದೆಹಲಿಗೆ ವಾಪಸಾಗುವುದನ್ನು ಸಿಂಗ್ ಒಂದು ವಾರ ಮುಂದೂಡಿದ್ದಾರೆ. ಈ ನಡುವೆ, ರಾಹುಲ್ ಗಾಂಧಿ ಅವರೂ ಅಮೆರಿಕಕ್ಕೆ ತೆರಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲಾಗಿಲ್ಲ. ಬುಧವಾರ ನೀತಿ ಆಯೋಗದ ಸಭೆ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ದಿಗ್ವಿಜಯ್ ಸಿಂಗ್ ಅವರು ಅಮೆರಿಕದಿಂದ ಹಿಂತಿರುಗಿಲ್ಲ. ರಾಹುಲ್‍ಗಾಂಧಿ ಅವರೂ ದೆಹಲಿಯಲ್ಲಿಲ್ಲ. ಹೀಗಾಗಿ ಅವರು ವಾಪಸ್ ಆದ  ನಂತರ ಬಂದು ಚರ್ಚಿಸುತ್ತೇನೆ ಎಂದರು.

ಅಕ್ಟೋಬರ್‍ನಲ್ಲಿ ವಿಸ್ತರಣೆ ಆಗಬಹುದೇ ಎಂಬ ಪ್ರಶ್ನೆಗೆ ಅವರಿನ್ನೂ ವಾಪಸ್ ಆಗಿಲ್ಲ, ಈಗಲೇ ನಾನು ಹೇಗೆ ಹೇಳಲಿ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ  ಯೋಜನೆ ಮುಂದಕ್ಕೆ ಹೋಗುತ್ತಿರುವುದು ಇದು ಆರನೇ ಬಾರಿ. ಪ್ರತಿಬಾರಿ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾಪ ಆದಾಗಲೆಲ್ಲ, ಆಕಾಂಕ್ಷಿಗಳ ದಂಡು ದೆಹಲಿಗೆ ಆಗಮಿಸುತ್ತದೆ. ಈ ಬಾರಿ ಸಂಪುಟ   ಪುನಾರಚನೆ ಕೂಡ ಆಗುತ್ತದೆ ಮತ್ತು ಹಲವು ಸಚಿವರನ್ನು ಕೈಬಿಡಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹಲವು ಸಚಿವರು ಮುಂಚಿತವಾಗಿಯೇ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು.  ದೆಹಲಿಗೆ ಸಚಿವಾಕಾಂಕ್ಷಿಗಳ ದಂಡೂ ಬಂದಿತ್ತು. ದಿಗ್ವಿಜಯ್ ಸಿಂಗ್ ಸದ್ಯಕ್ಕೆ ಅಮೆರಿಕದಿಂದ ವಾಪಸ್ ಬರುವುದಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆ, ಬಹುತೇಕ ಮಂದಿ ಹಿಂದಿರುಗಿದರು. ಕೆಲವು  ಆಕಾಂಕ್ಷಿಗಳು ಸಂಜೆಯವರೆಗೂ ಮುಖ್ಯಮಂತ್ರಿಗಳನ್ನು ತಮ್ಮ ಬೆಂಬಲಿಗ ರೊಂದಿಗೆ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದುದು ಕಂಡು ಬಂತು.

ರಾಹುಲ್ ರಾಜ್ಯ ಪ್ರವಾಸ ಮೊಟಕು
ಬೆಂಗಳೂರು:
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಹು ನಿರೀಕ್ಷಿತ ರಾಜ್ಯ ಪ್ರವಾಸ ಮೊಟಕುಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಸ್ವದೇಶಕ್ಕೆ ವಾಪಸ್ ಆಗುವುದು ಒಂದು ವಾರ ವಿಳಂಬವಾಗುವ ನಿರೀಕ್ಷೆ ಇದೆ. ಒಂದು ವೇಳೆ ವಾಪಸ್ ಬಂದರೂ ಅವರು ಬಿಹಾರ ಚುನಾವಣೆಯಲ್ಲಿ  ತೊಡಗಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಮಧ್ಯೆ ರಾಜ್ಯದಲ್ಲಿ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಜತೆಗೆ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ಭುಗಿಲೇಳುತ್ತಿದೆ.

ರೈತರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಾನಾ ಸಂಘಟನೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಮಹದಾಯಿ ಹಾಗೂ ಕಾವೇರಿ ಸಮಸ್ಯೆಯೂ ರಾಹುಲ್‍ಗೆ ಕಿರಿಕಿರಿ ಮಾಡಬಹುದು.  ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಪ್ರವಾಸ ಮೊಟಕುಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ರಾಹುಲ್ ಪ್ರವಾಸ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಆಯೋಜಿಸುವ ಮೂರು  ಕಾರ್ಯಕ್ರಮ ಪಟ್ಟಿಯನ್ನು ಹೈಕಮಾಂಡ್‍ಗೆ ಕಳುಹಿಸಲಾಗಿದ್ದರೂ ಅದಕ್ಕಿನ್ನೂ ಸಮ್ಮತಿ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com