ಮಹದಾಯಿ ಮಧ್ಯಂತರ ಅರ್ಜಿಗೆ ರಾಜ್ಯ ತೀರ್ಮಾನ

ಮಹದಾಯಿ ಯೋಜನೆ ಕುರಿತಂತೆ ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ರಾಜ್ಯ ಜಲ ವಿವಾದಗಳ ಕಾನೂನು ತಂಡದ ನೇತೃತ್ವ ವಹಿಸಿರುವ ಫಾಲಿ ನಾರಿಮನ್ ಒಪ್ಪಿಗೆ ಸೂಚಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ಮಹದಾಯಿ ಯೋಜನೆ ಕುರಿತಂತೆ ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ರಾಜ್ಯ ಜಲ ವಿವಾದಗಳ ಕಾನೂನು ತಂಡದ ನೇತೃತ್ವ ವಹಿಸಿರುವ ಫಾಲಿ ನಾರಿಮನ್ ಒಪ್ಪಿಗೆ ಸೂಚಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಸಿದ್ದರಾಮಯ್ಯ, 2-3 ದಿನದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾ ಗುವುದು. ಮಧ್ಯಂತರ ಅರ್ಜಿಯಿಂದ ಆಗ ಬಹುದಾದ ಲಾಭ-ನಷ್ಟದ ಬಗ್ಗೆ ಚರ್ಚಿಸಿಯೇ ಅಂತಿಮವಾಗಿ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು. ಮಹದಾಯಿ ವಿವಾದ ಬಗೆಹರಿಯಲು ಕೇವಲ 2 ಮಾರ್ಗಗಳಿವೆ. ಒಂದು ನ್ಯಾಯಾಧಿಕರಣದ ಮುಂದೆ ಹೋರಾಟ ನಡೆಸು ವುದು. ಇನ್ನೊಂದು ಸರಳ ಮಾರ್ಗ, ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಪರಿಹಾರ ಕಾಣುವುದು ಇದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ? ಬಿಜೆಪಿ ಮುಖಂಡರು ಹೇಳಿದ ಪ್ರಕಾರ ಸೋನಿಯಾ ಗಾಂಧಿಯವರ ಬಳಿ ನಿಯೋಗ ಹೋಗುವುದರಲ್ಲಿ ಅರ್ಥವಿಲ್ಲ.

ಅವರೇನು ಪ್ರಧಾನಿಯೇ? ತಾವು ಗೋವಾ ಗೋವಾ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರೊಂದಿಗೆ ಈ ವಿಷಯವಾಗಿ ಚರ್ಚೆ ಮಾಡಲೂ ಹೋಗುವುದಿಲ್ಲ. ಅಲ್ಲಿನ ವಿರೋಧ ಪಕ್ಷದ ನಾಯಕರನ್ನು ಒಪ್ಪಿಸಬೇಕು ಎಂದೆಲ್ಲ ಹೇಳುವ ವಾದ ನಿರರ್ಥಕವಾದುದು ಎಂದು ಹೇಳಿದರು. ಮಹದಾಯಿ ಯೋಜನೆ ಅನುಷ್ಠಾನಗೊಳ್ಳಬೇಕೆಬುದು ಸರ್ಕಾರ ಇಚ್ಛೆ, ಅದಕ್ಕಾಗಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಾಗಿತ್ತು.

ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ 40 ವರ್ಷದ ರಾಜಕೀಯ ಅನುಭವದಲ್ಲಿ ಇಂಥ ಪ್ರಧಾನಿಯನ್ನು ಎಲ್ಲಿಯೂ ನೋಡಿಲ್ಲ. ಅಂತರ್ ರಾಜ್ಯ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿನ ವಿರೋಧ ಪಕ್ಷದ ಮುಖಂಡರ ಮನವೊಲಿಸುವ ಕಾರ್ಯ ನೀವು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಧಾನಿ ಬಳಿ ನಿಯೋಗ ಹೋದಾಗಲೂ ಬಿಜೆಪಿಗರು ತಮ್ಮೊಂದಿಗೆ ಕೈಜೋಡಿಸಿಲ್ಲ. ಅನಂತಕುಮಾರ, ಸದಾನಂದಗೌಡ, ಜಗದೀಶ ಶೆಟ್ಟರ್ ಮೌನವಾಗಿದ್ದರು. ಪ್ರಧಾನಿ ಬಳಿ ನಿಯೋಗ ಹೋಗುವ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ ಹಾಗೂ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರ ಒಪ್ಪಿಸಲಿ, ಅಲ್ಲಿನ ಮುಖ್ಯಮಂತ್ರಿಗಳ ಮನವೊಲಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು. ನಿಯೋಗದ ಬಳಿ ಪ್ರಧಾನಿಯವರೂ ಇದೇ ಧಾಟಿಯಲ್ಲಿ ಮಾತನಾಡಿದರು.

ನಿಯೋಗ ಕೊಂಡೊಯ್ಯುವ ಪೂರ್ವದಲ್ಲಿ ಪ್ರಧಾನಿಗೆ ಹೀಗೇ ಮಾತನಾಡಿ ಎಂದು ರಾಜ್ಯ ಬಿಜೆಪಿ ಮುಖಂಡರು ಹೇಳಿಕೊಟ್ಟಂತಿತ್ತು ಎಂದು ಕಿಡಿಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನೂ ಕಾಲ ಮಿಂಚಿಲ್ಲ, ಪ್ರಧಾನಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಿ. ರಾಜಕಾರಣ ಬಿಟ್ಟು ಬಿಕ್ಕಟ್ಟು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಒತ್ತಾಯಿಸಿದರು.  

ಬಡ್ಡಿ ಮನ್ನಾಕ್ಕೆ ಚಿಂತನೆ ಧಾರವಾಡ: ರಾಜ್ಯದ ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ತೀವ್ರ ಬರದ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮಾಡಬೇಕೆಂಬ ಒತ್ತಡ ಸರ್ಕಾರದ ಮೇಲೆ ಹೆಚ್ಚುತ್ತಿದೆ.

ರೈತರ ಒಳಿತಿಗಾಗಿ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ಸಹಕಾರಿ ಬ್ಯಾಂಕುಗಳಲ್ಲಿ ಶೇ. 20ರಷ್ಟು ರೈತರು ಸಾಲ ಪಡೆದಿದ್ದು, ಉಳಿದ ಶೇ. 80ರಷ್ಟು ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ವಲಯದಲ್ಲಿ ಸಾಲ ಪಡೆದಿದ್ದಾರೆ. ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಆಲೋಚನೆ ಮಾಡಬೇಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com