ಭಾರತದಲ್ಲಿ ಶೇ 60 ರಷ್ಟು ಜನ ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ. ತೆರೆದ ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸಿ, ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಎಂಬ ಘೋಷಣೆಯೊಂದಿಗೆ ಸರ್ಕಾರ ಕಾರ್ಯ ಪ್ರವೃತ್ತವೂ ಆಯಿತು. ಆದರೆ ಈ ಅಭಿಯಾನ ಆರಂಭ ಮಾಡಿ ಒಂದು ವರ್ಷವಾದರೂ ಇದರಲ್ಲಿ ಹೆಚ್ಚಿನ ಪ್ರಗತಿಯೇನೂ ಕಂಡು ಬಂದಿಲ್ಲ ಎಂದು ವರದಿಗಳು ಹೇಳುತ್ತಿವೆ. ಪಂಚಾಯತ್, ಮುನಿಸಿಪಾಲಿಟಿಗಳಲ್ಲಿನ ಶೌಚಾಲಯ ನಿರ್ಮಾಣ ಯೋಜನೆಗೆ ಸರಿಯಾಗಿ ನಿಧಿ ಇಲ್ಲದೇ ಇರುವುದು ಕೂಡಾ ಈ ಯೋಜನೆ ಕುಂಠಿತಗೊಳ್ಳಲು ಕಾರಣ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಮುತುವರ್ಜಿ ತೋರಿಸಿದ್ದರೂ ಖಾಸಗಿ ವಲಯದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.