'ಭಾರತ ಮಾತೆಗೆ ಜಯವಾಗಲಿ' ಎನ್ನುವುದಕ್ಕೆ ಯಾವುದೇ ತೊಂದರೆಯಿಲ್ಲ: ನಜ್ಮಾ ಹೆಪ್ತುಲ್ಲಾ

'ಭಾರತ್ ಮಾತಾಕಿ ಜೈ' (ಭಾರತ ಮಾತೆಗೆ ಜಯವಾಗಲಿ) ಘೋಷಣೆ ಕೂಗುವುದರ ಸುತ್ತ ಎದ್ದಿರುವ ವಿವಾದ 'ಅನವಶ್ಯಕ ಮತ್ತು ಬೇಕಾಗಿರಲಿಲ್ಲ' ಎಂದಿರುವ ಅಲ್ಪಸಂಖ್ಯಾತ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ
Updated on

ನವದೆಹಲಿ: 'ಭಾರತ್ ಮಾತಾಕಿ ಜೈ' (ಭಾರತ ಮಾತೆಗೆ ಜಯವಾಗಲಿ) ಘೋಷಣೆ ಕೂಗುವುದರ ಸುತ್ತ ಎದ್ದಿರುವ ವಿವಾದ 'ಅನವಶ್ಯಕ ಮತ್ತು ಬೇಕಾಗಿರಲಿಲ್ಲ' ಎಂದಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ, ಜನ್ಮ ಭೂಮಿಯನ್ನು ಹೊಗಳುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಇದಕ್ಕೂ ಮತಧರ್ಮಕ್ಕೂ ಸಂಬಧವಿಲ್ಲ ಎಂದಿದ್ದಾರೆ.

"ನಿಮ್ಮ ಜನ್ಮಭೂಮಿ ಯಾವುದೇ ಆಗಿದ್ದರೂ ಅದಕ್ಕೆ ನಿಷ್ಟೆಯಿಂದಿರಬೇಕು" ಎಂದು ಸಚಿವೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ವಿವಾದದ ಹಿಂದೆ ರಾಜಕೀಯ ಅಡಗಿದ್ದು, ತಾವೇ ಮುಸ್ಲಿಂ ಆಗಿರುವುದರಿಂದ 'ಭಾರತ ಮಾತೆಗೆ ಜಯವಾಗಲಿ' ಎಂಬ ಘೋಷಣೆ ಕೂಗುವುದಕ್ಕೆ ನನಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.

"ಹಾಗೆ ಹೇಳುವುದರಿಂದ ನನ್ನ ಮತಧರ್ಮದ ವಿರುದ್ಧವಾಗೇನೂ ನಾನು ನಡೆದುಕೊಳ್ಳುತ್ತಿಲ್ಲ. ನನ್ನ ನಂಬಿಕೆ ಅಷ್ಟು ಸವಕಲಲ್ಲ. ಇದರಲ್ಲಿ ಧರ್ಮ ಅಡ್ಡ ಬರುವುದೇ ಇಲ್ಲ" ಎಂದಿರುವ ಅವರು ಪ್ರವಾದಿ ಮೊಹಮ್ಮದ್ ಕೂಡ ಇದನ್ನು ಅನುಮೋದಿಸಿದ್ದರು ಎಂದಿದ್ದಾರೆ.

"ಮೃತಪಟ್ಟಮೇಲೆ ಅವರು ಹೋಗುವುದೆಲ್ಲಿಗೆ ಎಂದು ಎಲ್ಲ ಮುಸ್ಲಿಮರನ್ನು ಕೇಳಬಯಸುತ್ತೇನೆ? ಇದಕ್ಕೆ ಉತ್ತರ ಜನ್ಮಭೂಮಿಯೇ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು" ಎಂದು ಕೂಡ ಸಚಿವೆ ಹೇಳಿದ್ದಾರೆ.

ಕಾನೂನು ತಡೆ ಇಲ್ಲದೆ ಹೋಗಿದ್ದರೆ 'ಭಾರತ ಮಾತಾಕಿ ಜೈ' ಎಂದು ಕೂಗದವರ ತಲೆ ಕಡಿಯುತ್ತಿದ್ದೆ ಎಂದು ಬಾಬಾ ರಾಮದೇವ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ಆ ರೀತಿಯ ಹೇಳಿಕೆಯನ್ನು ಯಾರು ಕೂಡ ನೀಡುವುದು ಸರಿಯಲ್ಲ ಎಂದಿದ್ದಾರೆ. "ನನ್ನ ವಾಕ್ ಸ್ವಾತಂತ್ರ್ಯ ಮತ್ತೊಬ್ಬನಿಗೆ ನೋವು ತರಬಾರದು. ನಾವು ಎಚ್ಚರದಿಂದಿರಬೇಕು" ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com